ಸೂರ್ಯ ಉದಯವಾಗುವ ಎಲ್ಲಾ ದಿನಗಳಲ್ಲೂ ಮನುಷ್ಯನ ದೇಹದ ಎಲ್ಲಾ ಸಂಧಿಗಳಿಗೂ ದಾನ ನೀಡಬೇಕಾಗಿದೆ

ಸೂರ್ಯ ಉದಯವಾಗುವ ಎಲ್ಲಾ ದಿನಗಳಲ್ಲೂ ಮನುಷ್ಯನ ದೇಹದ ಎಲ್ಲಾ ಸಂಧಿಗಳಿಗೂ ದಾನ ನೀಡಬೇಕಾಗಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಉದಯವಾಗುವ ಎಲ್ಲಾ ದಿನಗಳಲ್ಲೂ ಮನುಷ್ಯನ ದೇಹದ ಎಲ್ಲಾ ಸಂಧಿಗಳಿಗೂ ದಾನ ನೀಡಬೇಕಾಗಿದೆ. ಇಬ್ಬರು ಮನುಷ್ಯರ ನಡುವೆ ನ್ಯಾಯ ಪಾಲಿಸುವುದು ದಾನವಾಗಿದೆ. ಒಬ್ಬ ವ್ಯಕ್ತಿಗೆ ಅವನ ಸವಾರಿಯನ್ನೇರಲು ಸಹಾಯ ಮಾಡುವುದು ಅಥವಾ ಅವನ ಸಾಮಾನುಗಳನ್ನು ಎತ್ತಿ ಅದರ ಮೇಲಿಡುವುದು ದಾನವಾಗಿದೆ. ಉತ್ತಮವಾದ ಮಾತು ದಾನವಾಗಿದೆ. ನಮಾಝ್ ನಿರ್ವಹಿಸುವುದಕ್ಕಾಗಿ ಇಡುವ ಪ್ರತಿಯೊಂದು ಹೆಜ್ಜೆಯೂ ದಾನವಾಗಿದೆ. ರಸ್ತೆಯಿಂದ ತೊಂದರೆಗಳನ್ನು ನಿವಾರಿಸುವುದು ದಾನವಾಗಿದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಧಾರ್ಮಿಕ ನಿಯಮಗಳನ್ನು ಪಾಲಿಸಲು ಬದ್ಧನಾಗಿರುವ ಪ್ರತಿಯೊಬ್ಬ ಮುಸ್ಲಿಮನಿಗೂ ಅವನ ದೇಹದಲ್ಲಿರುವ ಮೂಳೆಗಳ ಸಂಧಿಗಳಷ್ಟು ಸಂಖ್ಯೆಯಲ್ಲಿ, ಅಲ್ಲಾಹು ಅವನಿಗೆ ಆರೋಗ್ಯ ನೀಡಿದ್ದಕ್ಕಾಗಿ ಮತ್ತು ಅವನಿಗೆ ಹಿಡಿಯಲು ಮತ್ತು ಚಾಚಲು ಸಾಧ್ಯವಾಗುವ ರೀತಿಯಲ್ಲಿ ಅವನ ಎಲುಬುಗಳಿಗೆ ಸಂಧಿಗಳನ್ನು ಉಂಟು ಮಾಡಿದ್ದಕ್ಕಾಗಿ ಕೃತಜ್ಞತೆಯ ರೂಪದಲ್ಲಿ ಸ್ವಯಂಪ್ರೇರಿತವಾಗಿ ದಾನ ಮಾಡುವುದು ಕಡ್ಡಾಯವಾಗಿದೆ. ಈ ದಾನಗಳನ್ನು ಹಣದ ರೂಪದಲ್ಲೇ ನೀಡಬೇಕೆಂಬ ಷರತ್ತಿಲ್ಲ, ಬದಲಿಗೆ ಸತ್ಕರ್ಮಗಳನ್ನು ನಿರ್ವಹಿಸುವ ಮೂಲಕ ಸಂದಾಯ ಮಾಡಬಹುದು. ಉದಾಹರಣೆಗೆ: ವೈಮನಸ್ಯದಲ್ಲಿರುವ ಇಬ್ಬರ ನಡುವೆ ನ್ಯಾಯ ಪಾಲಿಸುವುದು ಮತ್ತು ಸಂಧಾನ ಮಾಡುವುದು ದಾನವಾಗಿದೆ. ಸವಾರಿಯ ಮೇಲೇರಲು ಸಾಧ್ಯವಾಗದವನನ್ನು ಅದರ ಮೇಲೇರಿಸುವುದು ಅಥವಾ ಅವನ ಸಾಮಾನುಗಳನ್ನು ಎತ್ತಿ ಅದರಲ್ಲಿಡುವುದು ದಾನವಾಗಿದೆ. ದೇವಸ್ಮರಣೆ, ಪ್ರಾರ್ಥನೆ, ಸಲಾಂ ಹೇಳುವುದು ಮುಂತಾದ ಉತ್ತಮವಾದ ಮಾತುಗಳೆಲ್ಲವೂ ದಾನವಾಗಿವೆ. ನಮಾಝ್ ಮಾಡುವುದಕ್ಕಾಗಿ ನಡೆಯುವಾಗ ಇಡುವ ಹೆಜ್ಜೆಗಳೆಲ್ಲವೂ ದಾನವಾಗಿವೆ. ಜನರಿಗೆ ತೊಂದರೆಯಾಗುವ ವಸ್ತುಗಳನ್ನು ರಸ್ತೆಯಿಂದ ನಿವಾರಿಸುವುದು ದಾನವಾಗಿದೆ.

فوائد الحديث

ಮನುಷ್ಯ ಮೂಳೆಗಳ ರಚನೆ ಮತ್ತು ಅವುಗಳ ರಕ್ಷಣೆ ಅಲ್ಲಾಹನ ಅತಿದೊಡ್ಡ ಅನುಗ್ರಹವಾಗಿದೆ. ಆದ್ದರಿಂದ ಈ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಲು ಪ್ರತಿಯೊಂದು ಮೂಳೆಯ ಪರವಾಗಿ ದಾನ ಮಾಡಬೇಕಾದುದು ಅತ್ಯಾವಶ್ಯಕವಾಗಿದೆ.

ಅನುಗ್ರಹವು ಶಾಶ್ವತವಾಗಿ ಉಳಿಯುವುದಕ್ಕಾಗಿ ಪ್ರತಿದಿನವೂ ಹೊಸದಾಗಿ ಕೃತಜ್ಞತೆ ಸಲ್ಲಿಸುವುದನ್ನು ಪ್ರೋತ್ಸಾಹಿಸಲಾಗಿದೆ.

ಪ್ರತಿದಿನವೂ ಐಚ್ಛಿಕ ಕರ್ಮಗಳನ್ನು ಮತ್ತು ದಾನ-ಧರ್ಮಗಳನ್ನು ಮುಂದುವರಿಸುವುದನ್ನು ಪ್ರೋತ್ಸಾಹಿಸಲಾಗಿದೆ.

ಜನರ ನಡುವೆ ಸಂಧಾನ ಮಾಡುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.

ವ್ಯಕ್ತಿ ತನ್ನ ಸಹೋದರನಿಗೆ ಸಹಾಯ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಸಹಾಯ ಮಾಡುವುದು ದಾನವಾಗಿದೆ.

ಸಾಮೂಹಿಕ ನಮಾಝಿಗೆ ಹಾಜರಾಗುವುದನ್ನು, ಅದಕ್ಕಾಗಿ ನಡೆಯುತ್ತಾ ಸಾಗುವುದನ್ನು ಮತ್ತು ಮಸೀದಿಗಳ ಪರಿಪಾಲನೆ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ.

ಮುಸಲ್ಮಾನರಿಗೆ ತೊಂದರೆ ಅಥವಾ ಹಾನಿ ಮಾಡುವ ವಸ್ತುಗಳನ್ನು ದೂರವಿಡುವ ಮೂಲಕ ಅವರ ರಸ್ತೆಗಳನ್ನು ಗೌರವಿಸುವುದು ಕಡ್ಡಾಯವಾಗಿದೆ.

التصنيفات

Excellence and Merits of Islam