ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ನಾನು ನಿಮಗೆ ಹೆಚ್ಚು ಪ್ರೀತಿಯುಳ್ಳವನಾಗುವ ತನಕ ನಿಮ್ಮಲ್ಲಿ ಯಾರೂ ಸಂಪೂರ್ಣ…

ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ನಾನು ನಿಮಗೆ ಹೆಚ್ಚು ಪ್ರೀತಿಯುಳ್ಳವನಾಗುವ ತನಕ ನಿಮ್ಮಲ್ಲಿ ಯಾರೂ ಸಂಪೂರ್ಣ ಸತ್ಯವಿಶ್ವಾಸಿಯಾಗುವುದಿಲ್ಲ

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ನಾನು ನಿಮಗೆ ಹೆಚ್ಚು ಪ್ರೀತಿಯುಳ್ಳವನಾಗುವ ತನಕ ನಿಮ್ಮಲ್ಲಿ ಯಾರೂ ಸಂಪೂರ್ಣ ಸತ್ಯವಿಶ್ವಾಸಿಯಾಗುವುದಿಲ್ಲ."

[Sahih/Authentic.] [Al-Bukhari]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಎಲ್ಲಿಯ ತನಕ ಒಬ್ಬ ಮುಸಲ್ಮಾನನು ತನ್ನ ತಾಯಿ, ತಂದೆ, ಮಗ, ಮಗಳು ಮತ್ತು ಇತರೆಲ್ಲ ಜನರಲ್ಲಿರುವ ಪ್ರೀತಿಗಿಂತ ಪ್ರವಾದಿಯವರಲ್ಲಿರುವ ಪ್ರೀತಿಗೆ ಪ್ರಾಶಸ್ತ್ಯ ನೀಡುವುದಿಲ್ಲವೋ ಅಲ್ಲಿಯ ತನಕ ಅವನು ಪೂರ್ಣ ರೀತಿಯಲ್ಲಿ ಸತ್ಯವಿಶ್ವಾಸಿಯಾಗುವುದಿಲ್ಲ. ಪ್ರವಾದಿಯವರಲ್ಲಿರುವ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಯು ಅವರನ್ನು ಅನುಸರಿಸಲು, ಅವರಿಗೆ ಸಹಾಯ ಮಾಡಲು ಮತ್ತು ಅವರಿಗೆ ಅವಿಧೇಯತೆ ತೋರದಿರಲು ಕಾರಣವಾಗಬೇಕು.

فوائد الحديث

ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಸುವುದು ಕಡ್ಡಾಯವಾಗಿದೆ ಮತ್ತು ಇತರೆಲ್ಲ ಜನರ ಪ್ರೀತಿಗಿಂತ ಅವರ ಪ್ರೀತಿಗೆ ಪ್ರಾಶಸ್ತ್ಯ ನೀಡಬೇಕೆಂದು ಈ ಹದೀಸ್ ತಿಳಿಸುತ್ತದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ತಿಗೆ ಸಹಾಯ ಮಾಡುವುದು ಮತ್ತು ಅದಕ್ಕಾಗಿ ತನು ಮನ ಧನಗಳಿಂದ ಪರಿಶ್ರಮಿಸುವುದು ಪ್ರವಾದಿಯವರಿಲ್ಲಿರುವ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪರಿಪೂರ್ಣ ಪ್ರೀತಿಯ ದ್ಯೋತಕವಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಿಸಿದ್ದನ್ನು ಅನುಸರಿಸುವುದು, ಅವರು ತಿಳಿಸಿಕೊಟ್ಟ ವಿಷಯಗಳನ್ನು ಸತ್ಯವೆಂದು ಅಂಗೀಕರಿಸುವುದು, ಅವರು ವಿರೋಧಿಸಿದ ಮತ್ತು ಗದರಿಸಿದ ವಿಷಯಗಳಿಂದ ದೂರವಾಗುವುದು, ಅವರ ಅನುಕರಣೆ ಮಾಡುವುದು ಮತ್ತು ನವೀನಾಚಾರಗಳನ್ನು ತೊರೆಯುವುದು ಮುಂತಾದವುಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲಿರುವ ಪ್ರೀತಿಯ ಬೇಡಿಕೆಗಳಾಗಿವೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಕ್ಕು ಇತರೆಲ್ಲ ಮನುಷ್ಯರ ಹಕ್ಕುಗಳಿಗಿಂತ ಶ್ರೇಷ್ಠವೂ ಪ್ರಮುಖವೂ ಆಗಿದೆ. ಏಕೆಂದರೆ ನಾವು ದುರ್ಮಾರ್ಗದಿಂದ ಸನ್ಮಾರ್ಗಕ್ಕೆ ಬರಲು ಮತ್ತು ನರಕದಿಂದ ಪಾರಾಗಿ ಸ್ವರ್ಗವನ್ನು ಪಡೆಯಲು ಅವರು ಕಾರಣವಾಗಿದ್ದಾರೆ.