ನಿಮ್ಮಲ್ಲಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅದನ್ನು ತನ್ನ ಕೈಯಿಂದ ಬದಲಾಯಿಸಲಿ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ. ಅದು ಕೂಡ…

ನಿಮ್ಮಲ್ಲಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅದನ್ನು ತನ್ನ ಕೈಯಿಂದ ಬದಲಾಯಿಸಲಿ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ. ಅದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ. ಅದು ಅತಿ ದುರ್ಬಲ ವಿಶ್ವಾಸವಾಗಿದೆ

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮಲ್ಲಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅದನ್ನು ತನ್ನ ಕೈಯಿಂದ ಬದಲಾಯಿಸಲಿ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ. ಅದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ. ಅದು ಅತಿ ದುರ್ಬಲ ವಿಶ್ವಾಸವಾಗಿದೆ."

[Sahih/Authentic.] [Muslim]

الشرح

ಪ್ರತಿಯೊಬ್ಬರೂ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಡುಕುಗಳನ್ನು ಬದಲಾಯಿಸಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಅಜ್ಞಾಪಿಸುತ್ತಿದ್ದಾರೆ. ಕೆಡುಕುಗಳೆಂದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರು ವಿರೋಧಿಸಿದ ಕಾರ್ಯಗಳು. ಕೆಡುಕುಗಳನ್ನು ಕಂಡರೆ ಅದನ್ನು ಕೈಯಿಂದ ಬದಲಾಯಿಸುವುದು ಕಡ್ಡಾಯವಾಗಿದೆ—ಅದು ಸಾಧ್ಯವಾದರೆ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ ಬದಲಾಯಿಸಬೇಕು. ನಾಲಿಗೆಯಿಂದ ಬದಲಾಯಿಸುವುದು ಎಂದರೆ, ಕೆಡುಕು ಮಾಡುವವನನ್ನು ಅದರಿಂದ ತಡೆಯುವುದು, ಅವನಿಗೆ ಅದರ ಹಾನಿಗಳನ್ನು ವಿವರಿಸಿಕೊಡುವುದು ಮತ್ತು ಆ ಕೆಡುಕಿನ ಬದಲು ಒಳಿತಿನ ಕಡೆಗೆ ಅವನಿಗೆ ಮಾರ್ಗದರ್ಶನ ಮಾಡುವುದು. ಇದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ ಬದಲಾಯಿಸಬೇಕು. ಹೃದಯದಿಂದ ಬದಲಾಯಿಸುವುದು ಎಂದರೆ, ಕೆಡುಕನ್ನು ಅಸಹ್ಯ ಪಡುವುದು ಮತ್ತು ಸಾಧ್ಯವಾದರೆ ಅದನ್ನು (ಕೈಯಿಂದ ಅಥವಾ ನಾಲಿಗೆಯಿಂದ) ಬದಲಾಯಿಸುವೆನೆಂದು ದೃಢನಿರ್ಧಾರ ಮಾಡುವುದು. ಹೃದಯದಿಂದ ಬದಲಾಯಿಸುವುದು ಕೆಡುಕನ್ನು ಬದಲಾಯಿಸುವ ವಿಷಯದಲ್ಲಿ ಸತ್ಯವಿಶ್ವಾಸದ ಅತಿ ಕಡಿಮೆ ಮಟ್ಟವಾಗಿದೆ.

فوائد الحديث

ಈ ಹದೀಸ್ ಕೆಡುಕುಗಳನ್ನು ಬದಲಾಯಿಸುವ ವಿವಿಧ ಹಂತಗಳನ್ನು ವಿವರಿಸುವ ಮೂಲ ಅಂಶವಾಗಿದೆ.

ಕೆಡುಕುಗಳನ್ನು ತಡೆಯುವುದು ಹಂತ ಹಂತವಾಗಿರಬೇಕೆಂದು ಈ ಹದೀಸ್ ಆದೇಶಿಸುತ್ತದೆ. ಪ್ರತಿಯೊಬ್ಬನೂ ಅವನ ಶಕ್ತಿ-ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಡುಕುಗಳನ್ನು ತಡೆಯಬೇಕು.

ಕೆಡುಕುಗಳನ್ನು ತಡೆಯುವುದು ಧರ್ಮದ ಶ್ರೇಷ್ಠ ಅಂಗವಾಗಿದ್ದು, ಯಾರಿಗೂ ಅದರಲ್ಲಿ ವಿನಾಯಿತಿ ನೀಡಲಾಗಿಲ್ಲ. ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅದನ್ನು ಕಡ್ಡಾಯವಾಗಿ ನಿರ್ವಹಿಸಬೇಕು.

ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ತಡೆ ಯುವುದು ಸತ್ಯವಿಶ್ವಾಸದ ಲಕ್ಷಣವಾಗಿದೆ. ಸತ್ಯವಿಶ್ವಾಸವು ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.

ಕೆಡುಕನ್ನು ತಡೆಯುವ ಮೊದಲು, ಅದು ಕೆಡುಕು ಎಂಬ ಸ್ಪಷ್ಟ ಜ್ಞಾನವನ್ನು ಹೊಂದಿರಬೇಕಾದ ಷರತ್ತು ಇದೆ.

ಕೆಡುಕನ್ನು ಬದಲಾಯಿಸುವಾಗ ಅದು ಅದಕ್ಕಿಂತಲೂ ದೊಡ್ಡ ಕೆಡುಕಿಗೆ ಕಾರಣವಾಗಬಾರದೆಂಬ ಷರತ್ತು ಇದೆ.

ಕೆಡುಕನ್ನು ತಡೆಯುವುದಕ್ಕೆ ಕೆಲವು ಶಿಷ್ಟಾಚಾರಗಳು ಮತ್ತು ಷರತ್ತುಗಳಿದ್ದು, ಮುಸಲ್ಮಾನರು ಅವುಗಳನ್ನು ಅತ್ಯಗತ್ಯವಾಗಿ ಕಲಿಯಬೇಕು.

ಕೆಡುಕನ್ನು ತಡೆಯುವುದಕ್ಕೆ ಧಾರ್ಮಿಕ ನೀತಿಯ ಅಗತ್ಯವಿದೆ. ಹಾಗೆಯೇ ಜ್ಞಾನ ಮತ್ತು ಒಳನೋಟದ ಅಗತ್ಯವೂ ಇದೆ.

ಹೃದಯದಲ್ಲೂ ಕೂಡ ಆ ಕೆಡುಕನ್ನು ಕೆಡುಕೆಂದು ಭಾವಿಸದಿರುವುದು ಸತ್ಯವಿಶ್ವಾಸದ ದೌರ್ಬಲ್ಯವನ್ನು ಸೂಚಿಸುತ್ತದೆ.