ಸನ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಅದು ಅವರ…

ಸನ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಅದು ಅವರ ಪ್ರತಿಫಲಗಳಲ್ಲಿ ಏನನ್ನೂ ಕಡಿಮೆಗೊಳಿಸುವುದಿಲ್ಲ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸನ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಅದು ಅವರ ಪ್ರತಿಫಲಗಳಲ್ಲಿ ಏನನ್ನೂ ಕಡಿಮೆಗೊಳಿಸುವುದಿಲ್ಲ. ದುರ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪಾಪಕ್ಕೆ ಸಮಾನವಾದ ಪಾಪವನ್ನು ಪಡೆಯುತ್ತಾನೆ. ಅದು ಅವರ ಪಾಪಗಳಲ್ಲಿ ಏನನ್ನೂ ಕಡಿಮೆ ಮಾಡುವುದಿಲ್ಲ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರಾದರೂ ಮಾತು ಅಥವಾ ಕ್ರಿಯೆಯ ಮೂಲಕ, ಸತ್ಯ ಮತ್ತು ಒಳಿತಿನ ಮಾರ್ಗದ ಕಡೆಗೆ ಜನರಿಗೆ ಮಾರ್ಗದರ್ಶನ ಮಾಡಿದರೆ, ಆ ಮಾರ್ಗದರ್ಶನವನ್ನು ಅನುಸರಿಸುವವರು ಪಡೆಯುವ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಮಾರ್ಗದರ್ಶನ ಮಾಡಿದವನೂ ಪಡೆಯುತ್ತಾನೆ. ಇದರಿಂದ ಅನುಸರಿಸುವವನ ಪ್ರತಿಫಲದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಅದೇ ರೀತಿ, ಯಾರಾದರೂ ಮಾತು ಅಥವಾ ಕ್ರಿಯೆಯ ಮೂಲಕ, ಪಾಪ, ದೋಷ ಮತ್ತು ಧರ್ಮಸಮ್ಮತವಲ್ಲದ ವಿಷಯಗಳಿರುವ ಸುಳ್ಳು ಮತ್ತು ಕೆಡುಕಿನ ಮಾರ್ಗದ ಕಡೆಗೆ ಜನರಿಗೆ ಮಾರ್ಗದರ್ಶನ ಮಾಡಿದರೆ, ಆ ಮಾರ್ಗದರ್ಶನವನ್ನು ಅನುಸರಿಸುವವರು ಪಡೆಯುವ ಪಾಪ ಮತ್ತು ದೋಷಕ್ಕೆ ಸಮಾನವಾದ ಪಾಪ ಮತ್ತು ದೋಷವನ್ನು ಇವನೂ ಪಡೆಯುತ್ತಾನೆ. ಇದರಿಂದ ಅನುಸರಿಸುವವನ ಪಾಪದಲ್ಲಿ ಏನೂ ಕಡಿಮೆಯಾಗುವುದಿಲ್ಲ.

فوائد الحديث

ಇತರರನ್ನು ಸನ್ಮಾರ್ಗಕ್ಕೆ ಕರೆಯುವುದಕ್ಕೆ—ಅದು ಸ್ವಲ್ಪವಾದರೂ ಹೆಚ್ಚಾದರೂ—ಅದಕ್ಕೆ ಶ್ರೇಷ್ಠತೆಯಿದೆ ಮತ್ತು ಕರ್ಮವೆಸಗುವವನು ಪಡೆಯುವಷ್ಟೇ ಪ್ರತಿಫಲವನ್ನು ಕರೆಯುವವನೂ ಪಡೆಯುತ್ತಾನೆಂದು ತಿಳಿಸಲಾಗಿದೆ. ಇದು ಅಲ್ಲಾಹನ ಮಹಾ ಉದಾರತೆ ಮತ್ತು ಕರುಣೆಯ ಸಂಪೂರ್ಣತೆಯಾಗಿದೆ.

ಇತರರನ್ನು ದುರ್ಮಾರ್ಗಕ್ಕೆ ಕರೆಯುವುದರ—ಅದು ಸ್ವಲ್ಪವಾದರೂ ಹೆಚ್ಚಾದರೂ—ಅಪಾಯವನ್ನು ಮತ್ತು ಕರ್ಮವೆಸಗುವವನು ಹೊರುವಷ್ಟೇ ಪಾಪಭಾರವನ್ನು ಕರೆಯುವವನೂ ಹೊರುತ್ತಾನೆಂದು ತಿಳಿಸಲಾಗಿದೆ.

ಪ್ರತಿಫಲಗಳು ಕರ್ಮಗಳಿಗೆ ತಕ್ಕಂತಿದೆ. ಒಳಿತಿಗೆ ಕರೆಯುವವನು ಅದನ್ನು ಮಾಡುವವನ ಪ್ರತಿಫಲವನ್ನು ಪಡೆದರೆ, ಕೆಡುಕಿಗೆ ಕರೆಯುವವನು ಅದನ್ನು ಮಾಡುವವನು ಪಡೆಯುವ ಪಾಪವನ್ನು ಪಡೆಯುತ್ತಾನೆ.

ಜನರು ನೋಡುವ ರೀತಿಯಲ್ಲಿ ಸಾರ್ವಜನಿಕವಾಗಿ ಪಾಪಗಳನ್ನು ಮಾಡಿದರೆ ಅದನ್ನು ಜನರು ಅನುಸರಿಸಬಹುದೆಂಬ ಬಗ್ಗೆ ಮುಸಲ್ಮಾನನು ಎಚ್ಚರದಿಂದಿರಬೇಕು. ಏಕೆಂದರೆ, ಅದರಿಂದ ಅವನನ್ನು ಅನುಕರಿಸುವವನಷ್ಟೇ ಪಾಪವನ್ನು ಇವನೂ ಹೊರಬೇಕಾಗುತ್ತದೆ. ಅವನು ಅದಕ್ಕಾಗಿ ಪ್ರೋತ್ಸಾಹಿಸದಿದ್ದರೂ ಸಹ.

التصنيفات

Religious Innovation