ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಅದರ ಪಾತ್ರೆಗಳು ಆಕಾಶದಲ್ಲಿ ಕಡುಗತ್ತಲೆಯ ಮೋಡ ರಹಿತ ರಾತ್ರಿಯಲ್ಲಿ ಬೆಳಗುವ…

ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಅದರ ಪಾತ್ರೆಗಳು ಆಕಾಶದಲ್ಲಿ ಕಡುಗತ್ತಲೆಯ ಮೋಡ ರಹಿತ ರಾತ್ರಿಯಲ್ಲಿ ಬೆಳಗುವ ನಕ್ಷತ್ರ ಮತ್ತು ತಾರೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ

ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಕೊಳದ ಪಾತ್ರೆಗಳು ಯಾವುವು?" ಅವರು ಉತ್ತರಿಸಿದರು: "ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಅದರ ಪಾತ್ರೆಗಳು ಆಕಾಶದಲ್ಲಿ ಕಡುಗತ್ತಲೆಯ ಮೋಡ ರಹಿತ ರಾತ್ರಿಯಲ್ಲಿ ಬೆಳಗುವ ನಕ್ಷತ್ರ ಮತ್ತು ತಾರೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಅವು ಸ್ವರ್ಗದ ಪಾತ್ರೆಗಳಾಗಿದ್ದು ಅದರಿಂದ ಕುಡಿಯುವವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ. ಸ್ವರ್ಗದಿಂದ ಎರಡು ತೊರೆಗಳ ಮೂಲಕ ಅದಕ್ಕೆ ನೀರು ಹರಿದು ಬರುತ್ತದೆ. ಅದರ ನೀರು ಕುಡಿದವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ. ಅದರ ಉದ್ದವು ಅದರ ಅಗಲದಷ್ಟೇ ಇದೆ. ಅಮ್ಮಾನ್‌ನಿಂದ ಐಲದವರೆಗೆ. ಅದರ ನೀರು ಹಾಲಿಗಿಂತಲೂ ಕಡು ಬೆಳ್ಳಗಿನ ಬಣ್ಣವನ್ನು ಹೊಂದಿದೆ ಮತ್ತು ಜೇನಿಗಿಂತಲೂ ಸಿಹಿಯಾಗಿದೆ."

[Sahih/Authentic.] [Muslim]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆಣೆ ಮಾಡಿ ಹೇಳುವುದೇನೆಂದರೆ, ಪುನರುತ್ಥಾನ ದಿನದಂದು ಅವರ ಕೊಳದ ಪಾತ್ರೆಗಳು ಆಕಾಶದಲ್ಲಿರುವ ನಕ್ಷತ್ರ ಮತ್ತು ತಾರೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಅಂದರೆ, ಕಾರ್ಗತ್ತಲೆಯ ಚಂದ್ರನಿಲ್ಲದ ರಾತ್ರಿಯಲ್ಲಿ ಗೋಚರವಾಗುವ ನಕ್ಷತ್ರಗಳು ಮತ್ತು ತಾರೆಗಳು. ಏಕೆಂದರೆ ಬೆಳದಿಂಗಳ ರಾತ್ರಿಯಲ್ಲಿ ಚಂದ್ರನ ಬೆಳಕಿನಿಂದಾಗಿ ನಕ್ಷತ್ರಗಳು ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಅದೇ ರೀತಿ ಮೋಡಗಳಿಲ್ಲದ ರಾತ್ರಿಯಲ್ಲಿ. ಏಕೆಂದರೆ ಮೋಡಗಳಿದ್ದರೆ ಅವು ನಕ್ಷತ್ರಗಳನ್ನು ಮರೆಮಾಚುತ್ತವೆ. ಅವು ಸ್ವರ್ಗದ ಪಾತ್ರೆಗಳಾಗಿದ್ದು ಯಾರು ಅದರಿಂದ ನೀರನ್ನು ಕುಡಿಯುತ್ತಾರೋ ಅವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ. ಮತ್ತು ಅದೇ ಅವರ ಕೊನೆಯ ದಾಹವಾಗಿದೆ. ಅವರ ಕೊಳಕ್ಕೆ ಸ್ವರ್ಗದ ಎರಡು ತೊರೆಗಳಿಂದ ನೀರು ಹರಿದು ಬರುತ್ತದೆ. ಅದರ ಉದ್ದ ಮತ್ತು ಅಗಲ ಸಮಾನವಾಗಿವೆ. ಕೊಳದ ಅಂಚುಗಳು ಸಮಾನ ದೂರದಲ್ಲಿವೆ. ಅದರ ಉದ್ದವು ಸುಮಾರು ಅಮ್ಮಾನ್‌ನಿಂದ (ಸಿರಿಯಾದ ಬಲ್ಕಾದಲ್ಲಿರುವ ಒಂದು ಊರು) ಐಲದವರೆಗಿನ (ಸಿರಿಯಾದ ಹೊರವಲಯದಲ್ಲಿರುವ ಒಂದು ಪ್ರಸಿದ್ಧ ನಗರ) ದೂರವನ್ನು ಹೊಂದಿದೆ. ಕೊಳದ ನೀರು ಹಾಲಿಗಿಂತಲೂ ಹೆಚ್ಚು ಬೆಳ್ಳಗಿದೆ ಮತ್ತು ಅದರ ರುಚಿಯು ಜೇನಿಗಿಂತಲೂ ಹೆಚ್ಚು ಸಿಹಿಯಾಗಿದೆ.

فوائد الحديث

ಈ ಹದೀಸ್ ಕೊಳದ ಅಸ್ತಿತ್ವವನ್ನು ಮತ್ತು ಅದರಲ್ಲಿರುವ ಅನುಗ್ರಹಗಳನ್ನು ದೃಢೀಕರಿಸುತ್ತದೆ.

ಕೊಳದ ಬೃಹತ್ ಗಾತ್ರವನ್ನು, ಅದರ ಉದ್ದ, ಅಗಲ ಮತ್ತು ಅದರಲ್ಲಿರುವ ಪಾತ್ರೆಗಳ ಸಂಖ್ಯೆಯನ್ನು ಈ ಹದೀಸ್ ತಿಳಿಸುತ್ತದೆ.