ಇಶಾ ನಮಾಝ್ ಮತ್ತು ಫಜ್ರ್ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಆ ಎರಡು ನಮಾಝ್‌ಗಳಲ್ಲಿರುವ…

ಇಶಾ ನಮಾಝ್ ಮತ್ತು ಫಜ್ರ್ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಆ ಎರಡು ನಮಾಝ್‌ಗಳಲ್ಲಿರುವ (ಪ್ರತಿಫಲವನ್ನು) ಅವರು ತಿಳಿದಿದ್ದರೆ, ಅವರು ಅದಕ್ಕಾಗಿ ಅಂಬೆಗಾಲಿಟ್ಟುಕೊಂಡಾದರೂ ಬರುತ್ತಿದ್ದರು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಶಾ ನಮಾಝ್ ಮತ್ತು ಫಜ್ರ್ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಆ ಎರಡು ನಮಾಝ್‌ಗಳಲ್ಲಿರುವ (ಪ್ರತಿಫಲವನ್ನು) ಅವರು ತಿಳಿದಿದ್ದರೆ, ಅವರು ಅದಕ್ಕಾಗಿ ಅಂಬೆಗಾಲಿಟ್ಟುಕೊಂಡಾದರೂ ಬರುತ್ತಿದ್ದರು. ಜನರಿಗೆ ನಮಾಝ್ ನಿರ್ವಹಿಸಲು ಆಜ್ಞಾಪಿಸಿ, ನಂತರ ಒಬ್ಬರನ್ನು ಅವರಿಗೆ ಇಮಾಂ ಆಗಿ ನೇಮಿಸಿ, ನಂತರ ಸೌದೆಗಳ ಕಟ್ಟುಗಳೊಂದಿಗೆ ಕೆಲವು ಜನರನ್ನು ಕರೆದುಕೊಂಡು ಹೋಗಿ, ನಮಾಝ್‌ಗೆ ಬರದವರ ಮನೆಗಳನ್ನು ಸುಟ್ಟುಬಿಡಲು ನಾನು ಯೋಚಿಸಿದ್ದೆ."

[صحيح] [متفق عليه]

الشرح

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಕಪಟವಿಶ್ವಾಸಿಗಳ ಬಗ್ಗೆ ಮತ್ತು ನಮಾಝ್ ನಿರ್ವಹಿಸಲು—ವಿಶೇಷವಾಗಿ ಇಶಾ ಮತ್ತು ಫಜ್ರ್ ನಮಾಝ್ ನಿರ್ವಹಿಸಲು—ಅವರು ತೋರುವ ಆಲಸ್ಯದ ಬಗ್ಗೆ ತಿಳಿಸುತ್ತಿದ್ದಾರೆ. ಈ ಎರಡು ನಮಾಝ್‌ಗಳನ್ನು ಸಾಮೂಹಿಕವಾಗಿ ನಿರ್ವಹಿಸಿದರೆ ಸಿಗುವ ಶ್ರೇಷ್ಠತೆ ಮತ್ತು ಪ್ರತಿಫಲವನ್ನು ಅವರು ತಿಳಿದಿದ್ದರೆ, ಅವರು ಅದಕ್ಕಾಗಿ ಮಗು ಕೈ ಮತ್ತು ಮಂಡಿಯನ್ನು ಬಳಸಿ ಅಂಬೆಗಾಲಿಟ್ಟು ಬರುವಂತೆ (ಬಹಳ ಕಷ್ಟ ಅನುಭವಿಸಿಯಾದರೂ) ಬರುತ್ತಿದ್ದರು ಎಂದು ಹೇಳಿದ್ದಾರೆ. . ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸಲು ಆಜ್ಞಾಪಿಸಿ, ತನ್ನ ಬದಲಿಗೆ ಬೇರೊಬ್ಬ ವ್ಯಕ್ತಿಯನ್ನು ನಮಾಝ್ ಮಾಡಲು ಇಮಾಂ ಆಗಿ ನೇಮಿಸಿ, ನಂತರ ಕೆಲವು ಸಹಾಬಿಗಳೊಡನೆ ಸೌದೆಯ ಕಟ್ಟುಗಳನ್ನು ಹೊತ್ತೊಯ್ದು, ಸಾಮೂಹಿಕವಾಗಿ ನಮಾಝ್ ನಿರ್ವಹಿಸಲು ಬರದವರ ಮನೆಗಳಿಗೆ ಹೋಗಿ, ಅವರ ಮನೆಗಳನ್ನು ಸುಟ್ಟುಬಿಡಲು ದೃಢನಿಶ್ಚಯ ಮಾಡಿದ್ದರು. ಏಕೆಂದರೆ ಅದು ಅಷ್ಟೊಂದು ಗಂಭೀರ ವಿಷಯವಾಗಿತ್ತು. ಆದರೆ ಮನೆಯಲ್ಲಿ ಅಮಾಯಕ ಹೆಂಗಸರು, ಮಕ್ಕಳು ಮತ್ತು ನಿರಪರಾಧಿಗಳು ಇರುವ ಕಾರಣ ಅವರು ಆ ಯೋಚನೆಯನ್ನು ಕೈಬಿಟ್ಟರು.

فوائد الحديث

ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸುವುದರ ಬಗ್ಗೆ ಅಸಡ್ಡೆ ತೋರುವುದು ಗಂಭೀರ ವಿಷಯವಾಗಿದೆ.

ಕಪಟವಿಶ್ವಾಸಿಗಳು ತೋರಿಕೆಗಾಗಿ ಮತ್ತು ಪ್ರಶಂಸೆಗಾಗಿ ಮಾತ್ರ ಆರಾಧನೆಗಳನ್ನು ನಿರ್ವಹಿಸುತ್ತಾರೆ. ಜನರಿಗೆ ಕಾಣುವ ಸಮಯದಲ್ಲಿ ಮಾತ್ರ ಅವರು ನಮಾಝ್ ನಿರ್ವಹಿಸಲು ಮಸೀದಿಗೆ ಬರುತ್ತಾರೆ.

ಇಶಾ ಮತ್ತು ಫಜ್ರ್ ನಮಾಝ್‌ಗಳನ್ನು ಸಾಮೂಹಿಕವಾಗಿ ನಿರ್ವಹಿಸುವುದಕ್ಕೆ ಮಹಾ ಪ್ರತಿಫಲವಿದೆ ಮತ್ತು ಅಂಬೆಗಾಲಿಟ್ಟುಕೊಂಡಾದರೂ ಆ ನಮಾಝ್‌ಗಳನ್ನು ನಿರ್ವಹಿಸಲು ಬರಬೇಕಾಗಿದೆ.

ನಿತ್ಯ ಇಶಾ ಮತ್ತು ಫಜ್ರ್ ನಮಾಝ್‌ಗಳನ್ನು ಸಾಮೂಹಿಕವಾಗಿ ಮಸೀದಿಯಲ್ಲಿ ನಿರ್ವಹಿಸಿದರೆ ಕಪಟತೆಯಿಂದ ಮುಕ್ತಿ ಸಿಗುತ್ತದೆ. ಆ ಎರಡು ನಮಾಝ್‌ಗಳಿಗೆ ಹೋಗದಿರುವುದು ಕಪಟವಿಶ್ವಾಸಿಗಳ ಲಕ್ಷಣವಾಗಿದೆ.

التصنيفات

Hypocrisy, Virtue of Prayer