إعدادات العرض
ನಾನು ನಿಮ್ಮನ್ನು ಬಿಟ್ಟಂತೆಯೇ ನೀವು ನನ್ನನ್ನು ಬಿಡಿ. ನಿಮಗಿಂತ ಮೊದಲಿನವರು ನಾಶವಾಗಿದ್ದು ಅವರು ತಮ್ಮ ಪ್ರವಾದಿಗಳೊಂದಿಗೆ…
ನಾನು ನಿಮ್ಮನ್ನು ಬಿಟ್ಟಂತೆಯೇ ನೀವು ನನ್ನನ್ನು ಬಿಡಿ. ನಿಮಗಿಂತ ಮೊದಲಿನವರು ನಾಶವಾಗಿದ್ದು ಅವರು ತಮ್ಮ ಪ್ರವಾದಿಗಳೊಂದಿಗೆ ಪ್ರಶ್ನೆ ಕೇಳಿ ನಂತರ ಅದಕ್ಕೆ ವಿರುದ್ಧವಾಗಿ ಸಾಗಿದ ಕಾರಣದಿಂದಾಗಿದೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ನಿಮ್ಮನ್ನು ಬಿಟ್ಟಂತೆಯೇ ನೀವು ನನ್ನನ್ನು ಬಿಡಿ. ನಿಮಗಿಂತ ಮೊದಲಿನವರು ನಾಶವಾಗಿದ್ದು ಅವರು ತಮ್ಮ ಪ್ರವಾದಿಗಳೊಂದಿಗೆ ಪ್ರಶ್ನೆ ಕೇಳಿ ನಂತರ ಅದಕ್ಕೆ ವಿರುದ್ಧವಾಗಿ ಸಾಗಿದ ಕಾರಣದಿಂದಾಗಿದೆ. ಆದ್ದರಿಂದ, ನಾನು ನಿಮಗೆ ಒಂದು ವಿಷಯವನ್ನು ನಿಷೇಧಿಸಿದರೆ ಅದರಿಂದ ದೂರವಿರಿ. ನಾನು ನಿಮಗೆ ಏನಾದರೂ ಆಜ್ಞಾಪಿಸಿದರೆ, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅದನ್ನು ನಿರ್ವಹಿಸಿರಿ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Hausa Kurdî Português සිංහල دری অসমীয়া Tiếng Việt አማርኛ Svenska ไทย Yorùbá Кыргызча Kiswahili ગુજરાતી नेपाली Română മലയാളം Nederlands Oromoo తెలుగు پښتو Soomaali Kinyarwanda Malagasy Српски Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಧರ್ಮಶಾಸ್ತ್ರದ ನಿಯಮಗಳು ಮೂರು ವಿಧಗಳಲ್ಲಿವೆ: ಮೌನ ವಹಿಸಲಾದ ವಿಷಯಗಳು, ನಿಷೇಧಿಸಲಾದ ವಿಷಯಗಳು ಮತ್ತು ಆಜ್ಞಾಪಿಸಲಾದ ವಿಷಯಗಳು. ಮೊದಲನೆಯ ವಿಧವು ಶಾಸ್ತ್ರವು ಮೌನ ವಹಿಸಿದ ವಿಷಯಗಳು. ಅವುಗಳಿಗೆ ಯಾವುದೇ ನಿಯಮಗಳಿಲ್ಲ. ಮೂಲತತ್ವದ ಪ್ರಕಾರ ಯಾವುದೇ ವಿಷಯವೂ ಕಡ್ಡಾಯವಲ್ಲ. ಆದರೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ, ಕಡ್ಡಾಯ ಅಥವಾ ನಿಷೇಧದ ಬಗ್ಗೆ ವಿಧಿ ಅವತೀರ್ಣವಾಗಬಹುದು ಎಂಬ ಭಯದಿಂದ ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳದಿರುವುದು ಕಡ್ಡಾಯವಾಗಿತ್ತು. ಏಕೆಂದರೆ, ಅಲ್ಲಾಹು ದಾಸರ ಮೇಲಿರುವ ಕರುಣೆಯಿಂದಾಗಿ ಅವುಗಳನ್ನು (ಕಡ್ಡಾಯ ಅಥವಾ ನಿಷಿದ್ಧವೆನ್ನದೆ) ಬಿಟ್ಟಿದ್ದನು. ಆದರೆ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣಾನಂತರ, ಧಾರ್ಮಿಕ ವಿಧಿ ಕೇಳುವ ಉದ್ದೇಶದಿಂದ, ಅಥವಾ ಧಾರ್ಮಿಕ ವಿಷಯಗಳಲ್ಲಿ ಅಗತ್ಯವಾದ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಪ್ರಶ್ನೆ ಕೇಳುವುದಾದರೆ, ಅದಕ್ಕೆ ಅನುಮತಿಯಿದೆ, ಮಾತ್ರವಲ್ಲದೆ ಅದು ಅತ್ಯಾವಶ್ಯಕವೂ ಆಗಿದೆ. ಆದರೆ, ಪ್ರಶ್ನೆ ಕೇಳುವುದು ಮೊಂಡುತನ ಮತ್ತು ಸೋಗಲಾಡಿತನದಿಂದಾಗಿದ್ದರೆ, ಅದನ್ನೇ ಈ ಹದೀಸಿನಲ್ಲಿ ಪ್ರಶ್ನೆ ಕೇಳಬಾರದೆಂದು ಹೇಳಲಾಗಿದೆ. ಏಕೆಂದರೆ, ಅದು ಬನೂ ಇಸ್ರಾಯೀಲರಿಗೆ ಸಂಭವಿಸಿದ ಅದೇ ಅವಸ್ಥೆಗೆ ಒಯ್ಯುವ ಸಾಧ್ಯತೆಯಿದೆ. ಅವರೊಡನೆ ಒಂದು ಹಸುವನ್ನು ಕೊಯ್ಯಲು ಆದೇಶಿಸಲಾಗಿತ್ತು. ಅವರು ಯಾವುದೇ ಒಂದು ಹಸುವನ್ನು ಕೊಯ್ದಿದ್ದರೆ ಆ ಆಜ್ಞೆಯನ್ನು ಪಾಲಿಸಿದಂತಾಗುತ್ತಿತ್ತು. ಆದರೆ ಅವರು ಕಠೋರತನ ತೋರಿಸಿದಾಗ, ಅವರಿಗೆ ಕಠೋರಗೊಳಿಸಲಾಯಿತು. ಎರಡನೆಯದು: ನಿಷೇಧಿತ ವಿಷಯಗಳು. ಅಂದರೆ, ತೊರೆಯುವವನಿಗೆ ಪ್ರತಿಫಲ ಮತ್ತು ಮಾಡುವವನಿಗೆ ಶಿಕ್ಷೆಯಿರುವ ವಿಷಯಗಳು. ಇವೆಲ್ಲವುಗಳಿಂದ ದೂರವಿರುವುದು ಕಡ್ಡಾಯವಾಗಿದೆ. ಮೂರನೆಯದು: ಆಜ್ಞಾಪಿಸಲಾದ ವಿಷಯಗಳು. ಅಂದರೆ, ಮಾಡುವವನಿಗೆ ಪ್ರತಿಫಲ ಮತ್ತು ತೊರೆಯುವವನಿಗೆ ಶಿಕ್ಷೆಯಿರುವ ವಿಷಯಗಳು. ಇವುಗಳನ್ನು ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸುವುದು ಕಡ್ಡಾಯವಾಗಿದೆ.فوائد الحديث
ಅತ್ಯಾವಶ್ಯಕವಾದ ಪ್ರಮುಖ ವಿಷಯಗಳಲ್ಲಿ ತೊಡಗುವುದು, ಸದ್ಯಕ್ಕೆ ಅಗತ್ಯವಿಲ್ಲದ ವಿಷಯಗಳನ್ನು ಬಿಟ್ಟುಬಿಡುವುದು ಮತ್ತು ಇನ್ನೂ ಸಂಭವಿಸದಿರುವ ವಿಷಯಗಳ ಬಗ್ಗೆ ಪ್ರಶ್ನೆ ಕೇಳಲು ತೊಡಗದಿರುವುದು ಕಡ್ಡಾಯವಾಗಿದೆ.
ವಿಷಯಗಳನ್ನು ಕೆಲವೊಮ್ಮೆ ಕಗ್ಗಂಟಾಗಿಸುವ ಮತ್ತು ಹೆಚ್ಚಿನ ಭಿನ್ನಮತಗಳಿಗೆ ಹಾದಿಯೊದಗಿಸುವ ರೀತಿಯಲ್ಲಿ ಸಂಶಯಗಳಿಗೆ ಕಾರಣವಾಗುವ ಪ್ರಶ್ನೆಗಳನ್ನು ಕೇಳುವುದು ನಿಷಿದ್ಧವಾಗಿದೆ.
ನಿಷೇಧಿಸಲಾದ ಎಲ್ಲವನ್ನೂ ತೊರೆಯಲು ಆಜ್ಞಾಪಿಸಲಾಗಿದೆ. ಏಕೆಂದರೆ, ಅವುಗಳನ್ನು ತೊರೆಯಲು ಯಾವುದೇ ಕಷ್ಟವಿಲ್ಲ. ಆದ್ದರಿಂದಲೇ ಇಲ್ಲಿ ನಿಷೇಧದ ಬಗ್ಗೆ ಅನಿರ್ಬಂಧಿತವಾಗಿ ಹೇಳಲಾಗಿದೆ.
ಆಜ್ಞಾಪಿಸಲಾದ ವಿಷಯಗಳನ್ನು ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸಲು ಆಜ್ಞಾಪಿಸಲಾಗಿದೆ. ಏಕೆಂದರೆ, ಕೆಲವೊಮ್ಮೆ ಅವುಗಳನ್ನು ನಿರ್ವಹಿಸಲು ಕಷ್ಟವಾಗಬಹುದು ಅಥವಾ ಸಾಧ್ಯವಾಗದೇ ಇರಬಹುದು. ಆದ್ದರಿಂದಲೇ ಅವುಗಳನ್ನು ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸಲು ಆಜ್ಞಾಪಿಸಲಾಗಿದೆ.
ವಿಪರೀತ ಪ್ರಶ್ನೆ ಕೇಳುವುದನ್ನು ನಿಷೇಧಿಸಲಾಗಿದೆ. ವಿದ್ವಾಂಸರು ಪ್ರಶ್ನೆ ಕೇಳುವುದನ್ನು ಎರಡು ವಿಧಗಳಾಗಿ ವಿಂಗಡಿಸಿದ್ದಾರೆ: ಮೊದಲನೆಯದು, ಧಾರ್ಮಿಕ ವಿಷಯಗಳಲ್ಲಿ ಅಗತ್ಯವಾದ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಪ್ರಶ್ನೆ ಕೇಳುವುದು. ಇದು ಅತ್ಯಾವಶ್ಯಕವಾಗಿದ್ದು ಸಹಾಬಿಗಳು ಕೇಳುವ ಪ್ರಶ್ನೆಗಳು ಈ ವಿಧದಲ್ಲಿ ಸೇರುತ್ತವೆ. ಎರಡನೆಯದು, ಮೊಂಡುತನ ಮತ್ತು ಸೋಗಲಾಡಿತನದಿಂದ ಪ್ರಶ್ನೆ ಕೇಳುವುದು. ಇದು ನಿಷೇಧಿಸಲಾದ ವಿಧವಾಗಿದೆ.
ಹಿಂದಿನ ಸಮುದಾಯಗಳಲ್ಲಿ ಸಂಭವಿಸಿದಂತೆ, ಪ್ರವಾದಿಗೆ ವಿರುದ್ಧವಾಗಿ ಸಾಗುವುದರ ಬಗ್ಗೆ ಈ ಸಮುದಾಯಕ್ಕೆ ಎಚ್ಚರಿಕೆ ನೀಡಲಾಗಿದೆ.
ಅನಗತ್ಯವಾಗಿ ವಿಪರೀತ ಪ್ರಶ್ನೆ ಕೇಳುವುದು ಮತ್ತು ಪ್ರವಾದಿಗಳಿಗೆ ವಿರುದ್ಧವಾಗಿ ಸಾಗುವುದು ನಾಶಕ್ಕೆ ಹೇತುವಾಗುತ್ತದೆ. ವಿಶೇಷವಾಗಿ, ಅಲ್ಲಾಹು ಮಾತ್ರ ತಿಳಿದಿರುವ ಅದೃಶ್ಯ ವಿಷಯಗಳು, ಪುನರುತ್ಥಾನ ದಿನದ ಅವಸ್ಥೆಗಳು ಮುಂತಾದ ತಿಳಿಯಲು ಸಾಧ್ಯವಿಲ್ಲದ ವಿಷಯಗಳ ಬಗ್ಗೆ ಪ್ರಶ್ನೆ ಕೇಳುವುದು.
ಅತ್ಯಂತ ಜಟಿಲ ವಿಷಯಗಳ ಬಗ್ಗೆ ಪ್ರಶ್ನೆ ಕೇಳುವುದನ್ನು ನಿಷೇಧಿಸಲಾಗಿದೆ. ಔಝಾಈ ಹೇಳಿದರು: ಅಲ್ಲಾಹು ತನ್ನ ಒಬ್ಬ ದಾಸನನ್ನು ಜ್ಞಾನದ ಸಮೃದ್ಧಿಯಿಂದ ವಂಚಿತಗೊಳಿಸಲು ಬಯಸಿದರೆ, ಅವನ ನಾಲಗೆಯಲ್ಲಿ ಕುತರ್ಕಗಳನ್ನು ಹಾಕಿಬಿಡುತ್ತಾನೆ. ನಾನು ಕಂಡಂತೆ ಅಂತಹವರು ಅತಿಕಡಿಮೆ ಜ್ಞಾನವಿರುವವರಾಗಿದ್ದಾರೆ. ಇಬ್ನ್ ವಹಬ್ ಹೇಳಿದರು: ಮಾಲಿಕ್ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಜ್ಞಾನದ ವಿಷಯದಲ್ಲಿರುವ ತರ್ಕವು ಮನುಷ್ಯನ ಹೃದಯದಿಂದ ಜ್ಞಾನದ ಬೆಳಕನ್ನು ನಂದಿಸಿ ಬಿಡುತ್ತದೆ.