ಪ್ರಾರ್ಥನೆಯೇ ಆರಾಧನೆ

ಪ್ರಾರ್ಥನೆಯೇ ಆರಾಧನೆ

ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಪ್ರಾರ್ಥನೆಯೇ ಆರಾಧನೆ." ನಂತರ ಅವರು ಪಠಿಸಿದರು: “ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದನು: ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುತ್ತೇನೆ. ನನ್ನನ್ನು ಆರಾಧಿಸಲು ಯಾರು ಅಹಂಕಾರ ತೋರುತ್ತಾರೋ ಅವರು ನಿಂದನೀಯ ಸ್ಥಿತಿಯಲ್ಲಿ ನರಕವನ್ನು ಪ್ರವೇಶಿಸುವರು.”

[صحيح] [رواه أبو داود والترمذي وابن ماجه وأحمد]

الشرح

ಪ್ರಾರ್ಥನೆಯೇ ಆರಾಧನೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸಿದ್ದಾರೆ. ಆದ್ದರಿಂದ ಪ್ರಾರ್ಥನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕು. ಅದು ಬೇಡಿಕೆಯ ಪ್ರಾರ್ಥನೆ ಅಥವಾ ಆರಾಧನೆಯ ಪ್ರಾರ್ಥನೆಯಾಗಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ. ಬೇಡಿಕೆಯ ಪ್ರಾರ್ಥನೆಯೆಂದರೆ, ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಪ್ರಯೋಜನ ನೀಡುವ ವಸ್ತುಗಳನ್ನು ನೀಡಬೇಕೆಂದು ಮತ್ತು ಹಾನಿ ಮಾಡುವ ವಸ್ತುಗಳನ್ನು ತಡೆಯಬೇಕೆಂದು ಅಲ್ಲಾಹನಲ್ಲಿ ಬೇಡಿಕೊಳ್ಳುವುದು. ಆರಾಧನೆಯ ಪ್ರಾರ್ಥನೆಯು ಅಲ್ಲಾಹು ಇಷ್ಟಪಡುವ ಹಾಗೂ ಸಂಪ್ರೀತನಾಗುವ ಎಲ್ಲಾ ಮಾತುಗಳು ಮತ್ತು ಎಲ್ಲಾ ಬಾಹ್ಯ ಹಾಗೂ ಆಂತರಿಕ ಕರ್ಮಗಳನ್ನು ಹಾಗೂ ಹೃದಯದಿಂದ, ದೇಹದಿಂದ ಮತ್ತು ಹಣದಿಂದ ನಿರ್ವಹಿಸುವ ಎಲ್ಲಾ ಆರಾಧನೆಗಳನ್ನು ಒಳಗೊಳ್ಳುತ್ತದೆ. ನಂತರ ಅದಕ್ಕೆ ಪುರಾವೆಯಾಗಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ವಚನವನ್ನು ಪಠಿಸುತ್ತಾರೆ: “ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದನು: ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುತ್ತೇನೆ. ನನ್ನನ್ನು ಆರಾಧಿಸಲು ಯಾರು ಅಹಂಕಾರ ತೋರುತ್ತಾರೋ ಅವರು ನಿಂದನೀಯ ಸ್ಥಿತಿಯಲ್ಲಿ ನರಕವನ್ನು ಪ್ರವೇಶಿಸುವರು.”

فوائد الحديث

ಪ್ರಾರ್ಥನೆಯು ಆರಾಧನೆಯ ಮೂಲವಾಗಿದ್ದು ಅದನ್ನು ಅಲ್ಲಾಹು ಅಲ್ಲದವರಿಗೆ ಅರ್ಪಿಸಬಾರದು ಎಂದು ಈ ಹದೀಸ್ ತಿಳಿಸುತ್ತದೆ.

ಪ್ರಾರ್ಥನೆಯು ವಸ್ತುನಿಷ್ಠ ದಾಸ್ಯತ್ವವನ್ನು ಮತ್ತು ಅಲ್ಲಾಹನ ನಿರಪೇಕ್ಷತೆ ಮತ್ತು ಸಾಮರ್ಥ್ಯವನ್ನು ಒಪ್ಪಿಕೊಳ್ಳುವುದನ್ನು ಒಳಗೊಳ್ಳುತ್ತದೆ.

ಅಲ್ಲಾಹನನ್ನು ಆರಾಧಿಸಲು ಅಹಂಕಾರಪಡುವವರಿಗೆ ಮತ್ತು ಅವನಲ್ಲಿ ಪ್ರಾರ್ಥಿಸುವುದನ್ನು ಬಿಟ್ಟುಬಿಡುವವರಿಗೆ ಈ ಹದೀಸಿನಲ್ಲಿ ಉಗ್ರ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲಾಹನಲ್ಲಿ ಪ್ರಾರ್ಥಿಸಲು ಅಹಂಕಾರ ಪಡುವವರು ನಿಂದನೀಯ ಮತ್ತು ಅಪಮಾನಕರ ಸ್ಥಿತಿಯಲ್ಲಿ ನರಕವನ್ನು ಪ್ರವೇಶಿಸುತ್ತಾರೆಂದು ಈ ಹದೀಸಿನಲ್ಲಿ ಹೇಳಲಾಗಿದೆ.

التصنيفات

Merits of Supplication