ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ ಎಲ್ಲಾ ಸೃಷ್ಟಿಗಳ ವಿಧಿ…

ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ ಎಲ್ಲಾ ಸೃಷ್ಟಿಗಳ ವಿಧಿ ನಿರ್ಣಯಗಳನ್ನು ದಾಖಲಿಸಿದ್ದಾನೆ

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ ಎಲ್ಲಾ ಸೃಷ್ಟಿಗಳ ವಿಧಿ ನಿರ್ಣಯಗಳನ್ನು ದಾಖಲಿಸಿದ್ದಾನೆ." ಅವರು ಹೇಳಿದರು: "ಆಗ ಅವನ ಅರ್ಶ್ ನೀರಿನ ಮೇಲಿತ್ತು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ, ಸೃಷ್ಟಿಗಳ ಬದುಕು, ಸಾವು, ಆಹಾರ ಮುಂತಾದ ಅವರಿಗೆ ಸಂಬಂಧಿಸಿದ ಎಲ್ಲಾ ವಿಧಿ ನಿರ್ಣಯಗಳನ್ನು ಸವಿಸ್ತಾರವಾಗಿ ಸುರಕ್ಷಿತ ಫಲಕದಲ್ಲಿ ದಾಖಲಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹನ ತೀರ್ಮಾನದಂತೆಯೇ ಅವೆಲ್ಲವೂ ಸಂಭವಿಸುತ್ತವೆ. ಆದ್ದರಿಂದ, ಯಾವುದೇ ಒಂದು ವಿಷಯವು ಸಂಭವಿಸುವುದಾದರೂ ಅದು ಅಲ್ಲಾಹನ ತೀರ್ಮಾನ ಮತ್ತು ನಿರ್ಣಯದ ಪ್ರಕಾರವೇ ಸಂಭವಿಸುತ್ತದೆ. ಮನುಷ್ಯನಿಗೆ ಏನಾದರೂ ಕೆಡುಕು ಸಂಭವಿಸಿದರೆ, ಅದು ಅವನಿಗೆ ಸಂಭವಿಸದೆ ತಪ್ಪಿ ಹೋಗುವುದಾಗಿರಲಿಲ್ಲ. ಅದೇ ರೀತಿ, ಅವನಿಗೆ ಏನಾದರೂ ಕೆಡುಕು ಸಂಭವಿಸದೆ ತಪ್ಪಿ ಹೋದರೆ, ಅದು ಅವನಿಗೆ ಸಂಭವಿಸುವುದಾಗಿರಲಿಲ್ಲ.

فوائد الحديث

ಅಲ್ಲಾಹನ ತೀರ್ಮಾನ ಮತ್ತು ನಿರ್ಣಯದಲ್ಲಿ (ವಿಧಿಯಲ್ಲಿ) ವಿಶ್ವಾಸವಿಡುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.

ವಿಧಿ ನಿರ್ಣಯ ಎಂದರೆ, ಅಲ್ಲಾಹನಿಗೆ ಎಲ್ಲಾ ವಸ್ತುಗಳ ಬಗ್ಗೆ ಜ್ಞಾನವಿದೆ, ಅವನು ಅವೆಲ್ಲವನ್ನೂ ದಾಖಲಿಸಿಟ್ಟಿದ್ದಾನೆ, ಎಲ್ಲವೂ ಅವನ ಇಚ್ಛೆಯಂತೆಯೇ ನಡೆಯುತ್ತದೆ ಮತ್ತು ಅವನೇ ಅವುಗಳನ್ನು ಸೃಷ್ಟಿಸುತ್ತಾನೆ ಎಂದಾಗಿದೆ.

ಆಕಾಶಗಳು ಮತ್ತು ಭೂಮಿಯ ಸೃಷ್ಟಿಗಿಂತ ಮೊದಲೇ ವಿಧಿ ನಿರ್ಣಯಗಳನ್ನು ದಾಖಲಿಸಲಾಗಿದೆ ಎಂಬ ವಿಶ್ವಾಸವು ಆ ವಿಧಿಗಳನ್ನು ಆತ್ಮತೃಪ್ತಿಯಿಂದ ಅಂಗೀಕರಿಸುವಂತೆ ಮಾಡುತ್ತದೆ.

ಆಕಾಶಗಳು ಮತ್ತು ಭೂಮಿಯ ಸೃಷ್ಟಿಗಿಂತ ಮೊದಲು ಅಲ್ಲಾಹನ ಅರ್ಶ್ ನೀರಿನ ಮೇಲಿತ್ತು ಎಂದು ಈ ಹದೀಸ್ ತಿಳಿಸುತ್ತದೆ.

التصنيفات

Levels of Divine Decree and Fate