ಅವರು ಹೇಳಿದ ಆ ಮಾತು ಮಾತ್ರ ಸತ್ಯವಾಗಿದೆ. ಜಿನ್ನ್‌ಗಳು ಆ ಮಾತನ್ನು (ಆಕಾಶದಿಂದ) ಕಸಿದುಕೊಂಡು ಅವರ ಗೆಳೆಯರ (ಜ್ಯೋತಿಷಿಗಳ) ಕಿವಿಯಲ್ಲಿ…

ಅವರು ಹೇಳಿದ ಆ ಮಾತು ಮಾತ್ರ ಸತ್ಯವಾಗಿದೆ. ಜಿನ್ನ್‌ಗಳು ಆ ಮಾತನ್ನು (ಆಕಾಶದಿಂದ) ಕಸಿದುಕೊಂಡು ಅವರ ಗೆಳೆಯರ (ಜ್ಯೋತಿಷಿಗಳ) ಕಿವಿಯಲ್ಲಿ ಕೋಳಿ ಕುಕ್ಕುವಂತೆ ಸದ್ದುಮಾಡುತ್ತಾ ಪಿಸುಗುಡುತ್ತಾರೆ. ಅವರು (ಜ್ಯೋತಿಷಿಗಳು) ಅದಕ್ಕೆ ನೂರಕ್ಕಿಂತಲೂ ಹೆಚ್ಚು ಸುಳ್ಳುಗಳನ್ನು ಬೆರೆಸುತ್ತಾರೆ

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಜನರು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜ್ಯೋತಿಷ್ಯರ ಬಗ್ಗೆ ಕೇಳಿದಾಗ, ಅವರು ಉತ್ತರಿಸಿದರು: "ಅವರು ಏನೂ ಅಲ್ಲ." ಜನರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಕೆಲವೊಮ್ಮೆ ಅವರು ಹೇಳುವ ಮಾತುಗಳು ಸತ್ಯವಾಗುತ್ತದೆಯಲ್ಲವೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವರು ಹೇಳಿದ ಆ ಮಾತು ಮಾತ್ರ ಸತ್ಯವಾಗಿದೆ. ಜಿನ್ನ್‌ಗಳು ಆ ಮಾತನ್ನು (ಆಕಾಶದಿಂದ) ಕಸಿದುಕೊಂಡು ಅವರ ಗೆಳೆಯರ (ಜ್ಯೋತಿಷಿಗಳ) ಕಿವಿಯಲ್ಲಿ ಕೋಳಿ ಕುಕ್ಕುವಂತೆ ಸದ್ದುಮಾಡುತ್ತಾ ಪಿಸುಗುಡುತ್ತಾರೆ. ಅವರು (ಜ್ಯೋತಿಷಿಗಳು) ಅದಕ್ಕೆ ನೂರಕ್ಕಿಂತಲೂ ಹೆಚ್ಚು ಸುಳ್ಳುಗಳನ್ನು ಬೆರೆಸುತ್ತಾರೆ."

[Sahih/Authentic.] [Al-Bukhari]

الشرح

ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನು ಹೇಳುವವರ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾದಾಗ, ಅವರು ಹೇಳಿದರು: ಅವರ ಕಡೆಗೆ ಗಮನ ನೀಡಬೇಡಿ. ಅವರ ಮಾತುಗಳನ್ನು ಸ್ವೀಕರಿಸಬೇಡಿ. ಅವರಿಗೆ ಯಾವುದೇ ಪ್ರಾಮುಖ್ಯತೆಯಿಲ್ಲ. ಜನರು ಹೇಳಿದರು: ಆದರೆ ಕೆಲವೊಮ್ಮೆ ಅವರು ಹೇಳಿದ ಮಾತು ಸತ್ಯವಾಗುತ್ತದೆಯಲ್ಲವೇ. ಇಂತಿಂತಹ ತಿಂಗಳ ಇಂತಿಂತಹ ದಿನದಲ್ಲಿ ಇಂತಿಂತಹ ಘಟನೆ ಸಂಭವಿಸುತ್ತದೆಯೆಂದು ಅವರು ಹೇಳಿದರೆ ಅವರು ಹೇಳಿದಂತೆ ಅದು ಸಂಭವಿಸುತ್ತದೆಯಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಜಿನ್ನ್‌ಗಳು (ಯಕ್ಷ) ಆಕಾಶದಲ್ಲಿ ನಡೆಯುವ ಸಂಗತಿಗಳನ್ನು ಕದ್ದಾಲಿಸುತ್ತಾರೆ. ನಂತರ ಅಲ್ಲಿಂದ ಇಳಿದು, ತಮ್ಮ ಗೆಳೆಯರಾದ ಜ್ಯೋತಿಷಿಗಳ ಬಳಿಗೆ ಬಂದು ತಾವು ಆಲಿಸಿದ್ದನ್ನು ಅವರಿಗೆ ತಿಳಿಸುತ್ತಾರೆ. ಆಕಾಶದಿಂದ ಕದ್ದು ಕೇಳಿದ ಈ ಸತ್ಯಕ್ಕೆ ಜ್ಯೋತಿಷಿಗಳು ನೂರು ಸುಳ್ಳುಗಳನ್ನು ಬೆರೆಸುತ್ತಾರೆ.

فوائد الحديث

ಜ್ಯೋತಿಷಿಗಳ ಮಾತುಗಳನ್ನು ನಂಬಬಾರದು, ಅವರು ಹೇಳುವುದೆಲ್ಲವೂ ಸುಳ್ಳು ಮತ್ತು ಊಹೆಗಳು ಮಾತ್ರ ಎಂದು ಈ ಹದೀಸ್ ತಿಳಿಸುತ್ತದೆ. ಕೆಲವೊಮ್ಮೆ ಅವರು ಹೇಳಿದ್ದು ಸತ್ಯವಾದರೂ ಸಹ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಯೋಗದ ನಂತರ ಆಕಾಶವನ್ನು ಭದ್ರಪಡಿಸಲಾಗಿದೆ. ಆದ್ದರಿಂದ ಶೈತಾನರಿಗೆ ದೇವವಾಣಿಯನ್ನು ಅಥವಾ ಇತರ ಮಾತುಗಳನ್ನು ಕದ್ದಾಲಿಸಲು ಸಾಧ್ಯವಾಗುವುದಿಲ್ಲ. ಅವರೇನಾದರೂ ಕದ್ದಾಲಿಸಲು ಪ್ರಯತ್ನಿಸಿದರೆ ಉಲ್ಕೆಗಳನ್ನು ಎಸೆದು ಅವರನ್ನು ಓಡಿಸಲಾಗುತ್ತದೆ.

ಜಿನ್ನ್‌ಗಳಿಗೆ ಮನುಷ್ಯರಲ್ಲಿ ಸೇರಿದ ಗೆಳೆಯರಿದ್ದಾರೆ ಎಂದು ಈ ಹದೀಸ್ ತಿಳಿಸುತ್ತದೆ.