ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ…

ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ

ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಉಫೈರ್ ಎಂಬ ಹೆಸರಿನ ಒಂದು ಕತ್ತೆಯ ಮೇಲೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಓ ಮುಆದ್! ದಾಸರ ಮೇಲಿರುವ ಅಲ್ಲಾಹನ ಹಕ್ಕು ಏನೆಂದು ಮತ್ತು ಅಲ್ಲಾಹನ ಮೇಲಿರುವ ದಾಸರ ಹಕ್ಕು ಏನೆಂದು ನಿನಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಜನರಿಗೆ ಈ ಸಿಹಿಸುದ್ದಿಯನ್ನು ತಿಳಿಸಲೇ?" ಅವರು ಉತ್ತರಿಸಿದರು: "ಬೇಡ, ಅವರಿಗೆ ಸಿಹಿ ಸುದ್ದಿ ತಿಳಿಸಬೇಡ. ಅವರು ಅದರ ಮೇಲೆ ಅವಲಂಬಿತರಾಗಬಹುದು."

[Sahih/Authentic.] [Al-Bukhari and Muslim]

الشرح

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದಾಸರ ಮೇಲಿರುವ ಅಲ್ಲಾಹನ ಹಕ್ಕನ್ನು ಮತ್ತು ಅಲ್ಲಾಹನ ಮೇಲಿರುವ ದಾಸರ ಹಕ್ಕನ್ನು ವಿವರಿಸುತ್ತಿದ್ದಾರೆ. ದಾಸರ ಮೇಲಿರುವ ಅಲ್ಲಾಹನ ಹಕ್ಕು ಏನೆಂದರೆ ಅವರು ಅವನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬಾರದು. ಅಲ್ಲಾಹನ ಮೇಲಿರುವ ದಾಸರ ಹಕ್ಕು ಏನೆಂದರೆ ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡದ ಏಕದೇವ ವಿಶ್ವಾಸಿಗಳನ್ನು ಅವನು ಶಿಕ್ಷಿಸಬಾರದು. ನಂತರ ಮುಆದ್ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಈ ಅನುಗ್ರಹದ ಬಗ್ಗೆ ಜನರು ಸಂತೋಷಪಡುವುದಕ್ಕಾಗಿ ನಾನು ಈ ಸಿಹಿ ಸುದ್ದಿಯನ್ನು ಅವರಿಗೆ ತಿಳಿಸಲೇ?" ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರು ಅದರ ಮೇಲೆ ಅವಲಂಬಿತರಾಗುವರು ಎಂಬ ಭಯದಿಂದ ಅದನ್ನು ತಡೆದರು.

فوائد الحديث

ದಾಸರು ಕಡ್ಡಾಯವಾಗಿ ನಿರ್ವಹಿಸಬೇಕಾದ ಅಲ್ಲಾಹನ ಹಕ್ಕನ್ನು ಈ ಹದೀಸ್ ವಿವರಿಸುತ್ತದೆ. ಅದೇನೆಂದರೆ ಅವರು ಅವನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡಬಾರದು.

ಅದೇ ರೀತಿ, ಅಲ್ಲಾಹು ತನ್ನ ಅನುಗ್ರಹ ಮತ್ತು ಔದಾರ್ಯದಿಂದ ಕಡ್ಡಾಯವಾಗಿ ನಿರ್ವಹಿಸುವ ದಾಸರ ಹಕ್ಕನ್ನು ಕೂಡ ಈ ಹದೀಸ್ ವಿವರಿಸುತ್ತದೆ. ಅದೇನೆಂದರೆ ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವುದು ಮತ್ತು ಅವರನ್ನು ಶಿಕ್ಷಿಸದಿರುವುದು.

ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡದ ಏಕದೇವ ವಿಶ್ವಾಸಿಗಳು ಸ್ವರ್ಗವನ್ನು ಪಡೆಯುತ್ತಾರೆ ಎಂಬ ಮಹಾ ಸುವಾರ್ತೆಯನ್ನು ಈ ಹದೀಸ್ ತಿಳಿಸುತ್ತದೆ.

ಜ್ಞಾನವನ್ನು ಬಚ್ಚಿಟ್ಟ ಪಾಪಕ್ಕೆ ಗುರಿಯಾಗದಿರಲು ನಿಧನರಾಗುವುದಕ್ಕೆ ಮುಂಚೆ ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಈ ಹದೀಸನ್ನು ಜನರಿಗೆ ತಿಳಿಸಿಕೊಟ್ಟರು.

ಕೆಲವು ರೀತಿಯ ಹದೀಸ್‌ಗಳನ್ನು ಅವುಗಳ ಅರ್ಥವನ್ನು ಸರಿಯಾಗಿ ಗ್ರಹಿಸಲಾಗದ ಕೆಲವೊಂದು ಜನರಿಗೆ ತಿಳಿಸಿಕೊಡಬಾರದು ಎಂದು ಈ ಹದೀಸ್ ಸೂಚಿಸುತ್ತದೆ. ಅಂದರೆ, ಕರ್ಮ ಮಾಡಬೇಕೆಂಬ ಆಜ್ಞೆಯಿಲ್ಲದ ಮತ್ತು ಧಾರ್ಮಿಕವಾದ ಯಾವುದೇ ಶಿಕ್ಷೆಯ ಬಗ್ಗೆ ಉಲ್ಲೇಖವಿರದ ಹದೀಸ್‌ಗಳು.

ಏಕದೇವ ವಿಶ್ವಾಸಿಗಳ ಪೈಕಿ ಪಾಪವೆಸಗಿದವರ ವಿಧಿಯು ಅಲ್ಲಾಹನ ಇಚ್ಚೆಗೆ ಒಳಪಟ್ಟಿದೆ. ಅವನು ಅವರನ್ನು ಶಿಕ್ಷಿಸಬಹುದು ಅಥವಾ ಅವರನ್ನು ಕ್ಷಮಿಸಬಹುದು. ಶಿಕ್ಷೆಗೆ ಒಳಗಾದವರು ಶಿಕ್ಷೆಯ ನಂತರ ಸ್ವರ್ಗಕ್ಕೆ ಹೋಗುತ್ತಾರೆ.