ಜನರು ದಬ್ಬಾಳಿಕೆ ಮಾಡುವವನನ್ನು ನೋಡಿಯೂ ಅವನನ್ನು ತಡೆಯದಿದ್ದರೆ, ಅಲ್ಲಾಹು ತನ್ನ ಕಡೆಯ ಶಿಕ್ಷೆಯಿಂದ ಅವರೆಲ್ಲರನ್ನೂ…

ಜನರು ದಬ್ಬಾಳಿಕೆ ಮಾಡುವವನನ್ನು ನೋಡಿಯೂ ಅವನನ್ನು ತಡೆಯದಿದ್ದರೆ, ಅಲ್ಲಾಹು ತನ್ನ ಕಡೆಯ ಶಿಕ್ಷೆಯಿಂದ ಅವರೆಲ್ಲರನ್ನೂ ಆವರಿಸಿಕೊಳ್ಳಬಹುದು

ಅಬೂಬಕರ್ ಸಿದ್ದೀಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಓ ಜನರೇ! ನೀವು ಈ ವಚನವನ್ನು ಪಠಿಸುತ್ತೀರಿ: "ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಿ. ನೀವು ಸನ್ಮಾರ್ಗಿಗಳಾದರೆ, ದುರ್ಮಾರ್ಗದಲ್ಲಿರುವವರು ನಿಮಗೆ ಯಾವುದೇ ತೊಂದರೆ ಮಾಡಲಾರರು." ಆದರೆ, ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಜನರು ದಬ್ಬಾಳಿಕೆ ಮಾಡುವವನನ್ನು ನೋಡಿಯೂ ಅವನನ್ನು ತಡೆಯದಿದ್ದರೆ, ಅಲ್ಲಾಹು ತನ್ನ ಕಡೆಯ ಶಿಕ್ಷೆಯಿಂದ ಅವರೆಲ್ಲರನ್ನೂ ಆವರಿಸಿಕೊಳ್ಳಬಹುದು."

[صحيح] [رواه أبو داود والترمذي والنسائي في الكبرى وابن ماجه وأحمد]

الشرح

ಅಬೂಬಕರ್ ಸಿದ್ದೀಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಜನರು ಈ ವಚನವನ್ನು ಪಠಿಸುತ್ತಾರೆ: "ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಿ. ನೀವು ಸನ್ಮಾರ್ಗಿಗಳಾದರೆ, ದುರ್ಮಾರ್ಗದಲ್ಲಿರುವವರು ನಿಮಗೆ ಯಾವುದೇ ತೊಂದರೆ ಮಾಡಲಾರರು." [ಮಾಇದ: 105]. ಮನುಷ್ಯನು ತನ್ನ ಆತ್ಮವನ್ನು ಸುಧಾರಣೆ ಮಾಡುವುದಕ್ಕೆ ಮಾತ್ರ ಗಮನ ಕೇಂದ್ರೀಕರಿಸಬೇಕು, ಅದರ ನಂತರ ಬೇರೆ ಜನರೇನಾದರೂ ತಪ್ಪು ದಾರಿ ತುಳಿದರೆ ಅದರಿಂದ ಅವನಿಗೇನೂ ತೊಂದರೆಯಿಲ್ಲ, ಒಳಿತನ್ನು ಆದೇಶಿಸುವ ಮತ್ತು ಕೆಡುಕನ್ನು ತಡೆಯುವ ಹೊಣೆಗಾರಿಕೆ ಅವನಿಗಿಲ್ಲ ಎಂದು ಜನರು ಈ ವಚನವನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ಈ ವಚನದ ಅರ್ಥ ಹೀಗಲ್ಲ, ತಾನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆಂದು ಅವರು ಅವರಿಗೆ ತಿಳಿಸುತ್ತಾರೆ. ಜನರು ದಬ್ಬಾಳಿಕೆ ಮಾಡುವವನನ್ನು ಕಂಡು, ದಬ್ಬಾಳಿಕೆ ಮಾಡುವುದರಿಂದ ಅವನನ್ನು ತಡೆಯುವ ಶಕ್ತಿಯಿದ್ದೂ ಸಹ ಅವನನ್ನು ತಡೆಯದಿದ್ದರೆ, ಅಲ್ಲಾಹು ತನ್ನ ಕಡೆಯ ಶಿಕ್ಷೆಯಿಂದ ಅವರೆಲ್ಲರನ್ನೂ—ದಬ್ಬಾಳಿಕೆ ಮಾಡುವವನನ್ನೂ ಮೌನವಾಗಿರುವವನನ್ನೂ—ಆವರಿಸಿಕೊಳ್ಳಬಹುದು.

فوائد الحديث

ಮುಸ್ಲಿಮರು ಪರಸ್ಪರ ಉಪದೇಶ ನೀಡುವುದು, ಒಳಿತನ್ನು ಆದೇಶಿಸುವುದು ಹಾಗೂ ಕೆಡುಕನ್ನು ತಡೆಯುವುದು ಕಡ್ಡಾಯವಾಗಿದೆ.

ಅಲ್ಲಾಹನ ಸಾರ್ವತ್ರಿಕ ಶಿಕ್ಷೆಯು ದಬ್ಬಾಳಿಕೆ ಮಾಡುವವನನ್ನು ಮತ್ತು ಅದನ್ನು ತಡೆಯುವ ಶಕ್ತಿಯಿದ್ದೂ ಸಹ ಮೌನ ವಹಿಸಿದವನನ್ನು ಒಳಗೊಳ್ಳುತ್ತದೆ.

ಜನಸಾಮಾನ್ಯರಿಗೆ ಕುರ್‌ಆನ್ ಪಠ್ಯಗಳನ್ನು ಅವರು ಅದನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವಂತೆ ಕಲಿಸಿಕೊಡಬೇಕೆಂದು ತಿಳಿಸಲಾಗಿದೆ.

ಜನರು ಅಲ್ಲಾಹನ ಗ್ರಂಥವನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಕಾಳಜಿ ವಹಿಸಬೇಕಾದುದು ಕಡ್ಡಾಯವಾಗಿದೆ. ಏಕೆಂದರೆ, ಅವರು ಅದನ್ನು ಅಲ್ಲಾಹು ಉದ್ದೇಶಿಸದ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ.

ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ತಡೆಯುವುದನ್ನು ಬಿಟ್ಟುಬಿಟ್ಟರೆ ಸನ್ಮಾರ್ಗವನ್ನು ಪಡೆಯಲು ಸಾಧ್ಯವಾಗಲಾರದು.

ವಚನದ ಸರಿಯಾದ ವ್ಯಾಖ್ಯಾನವು ಹೀಗಿದೆ: ನಿಮ್ಮನ್ನು ನೀವು ಪಾಪಗಳಿಂದ ರಕ್ಷಿಸಿಕೊಳ್ಳಿರಿ. ನೀವು ನಿಮ್ಮನ್ನು ರಕ್ಷಿಸಿಕೊಂಡರೆ, ನಿಮಗೆ ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ತಡೆಯುವುದು ಸಾಧ್ಯವಾಗದಿದ್ದರೂ ಸಹ, ಪಾಪವೆಸಗುವ ಮೂಲಕ ದುರ್ಮಾರ್ಗಿಗಳಾದವರ ದುರ್ಮಾರ್ಗದಿಂದ ನಿಮಗೇನೂ ತೊಂದರೆಯಾಗುವುದಿಲ್ಲ. ನೀವು ಆ ಪಾಪಗಳಿಂದ ದೂರವಿದ್ದರೆ.

التصنيفات

Ruling of Enjoining Good and Forbidding Evil