ನಿಶ್ಚಯವಾಗಿಯೂ ಅಲ್ಲಾಹು ಅಕ್ರಮವೆಸಗುವವನಿಗೆ ಸಮಯಾವಕಾಶವನ್ನು ನೀಡುತ್ತಾನೆ. ಆದರೆ ಅವನು ಅವನನ್ನೇನಾದರೂ ಹಿಡಿದುಬಿಟ್ಟರೆ, ನಂತರ…

ನಿಶ್ಚಯವಾಗಿಯೂ ಅಲ್ಲಾಹು ಅಕ್ರಮವೆಸಗುವವನಿಗೆ ಸಮಯಾವಕಾಶವನ್ನು ನೀಡುತ್ತಾನೆ. ಆದರೆ ಅವನು ಅವನನ್ನೇನಾದರೂ ಹಿಡಿದುಬಿಟ್ಟರೆ, ನಂತರ ಅವನನ್ನು ಬಿಟ್ಟುಬಿಡುವುದಿಲ್ಲ

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಅಕ್ರಮವೆಸಗುವವನಿಗೆ ಸಮಯಾವಕಾಶವನ್ನು ನೀಡುತ್ತಾನೆ. ಆದರೆ ಅವನು ಅವನನ್ನೇನಾದರೂ ಹಿಡಿದುಬಿಟ್ಟರೆ, ನಂತರ ಅವನನ್ನು ಬಿಟ್ಟುಬಿಡುವುದಿಲ್ಲ." ನಂತರ ಅವರು ಈ ವಚನವನ್ನು ಪಠಿಸಿದರು: "ಅಕ್ರಮವೆಸಗುತ್ತಿರುವ ಊರುಗಳನ್ನು ಹಿಡಿಯುವಾಗ ತಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಹೀಗೆಯೇ ಆಗಿರುತ್ತದೆ. ನಿಶ್ಚಯವಾಗಿಯೂ ಅವನ ಹಿಡಿತವು ವೇದನಾಭರಿತ ಮತ್ತು ಕಠೋರವಾಗಿದೆ." [ಸೂರ ಹೂದ್: 102]

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಪಾಪಗಳು, ಬಹುದೇವರಾಧನೆ, ಜನರಿಗೆ ಅವರ ಹಕ್ಕುಗಳನ್ನು ನೀಡದೆ ಅನ್ಯಾಯವೆಸಗುವುದು ಮುಂತಾದವುಗಳಲ್ಲಿ ನಿರತರಾಗಿರುವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅಂತಹ ಅಕ್ರಮಿಗಳಿಗೆ ಸರ್ವಶಕ್ತನಾದ ಅಲ್ಲಾಹು ಅವರ ಆಯುಷ್ಯ ಮತ್ತು ಆಸ್ತಿಯಲ್ಲಿ ಇನ್ನಷ್ಟು ಹೆಚ್ಚಿಸಿ ಕೊಡುತ್ತಾನೆ, ಅವರಿಗೆ ಶಿಕ್ಷೆ ನೀಡಲು ಅವನು ಆತುರ ಪಡುವುದಿಲ್ಲ. ಅವರೇನಾದರೂ ತಮ್ಮ ತಪ್ಪುಗಳನ್ನು ಒಪ್ಪಿ ಪಶ್ಚಾತಾಪ ಪಡದಿದ್ದರೆ ಅವನು ಅವರನ್ನು ಹಿಡಿದು ಶಿಕ್ಷಿಸುತ್ತಾನೆ. ಅವರ ಅನ್ಯಾಯಗಳ ಹೆಚ್ಚಳದಿಂದಾಗಿ ಅವನು ಅವರನ್ನು ಶಿಕ್ಷಿಸದೆ ಬಿಟ್ಟು ಬಿಡುವುದಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ಅಕ್ರಮವೆಸಗುತ್ತಿರುವ ಊರುಗಳನ್ನು ಹಿಡಿಯುವಾಗ ತಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಹೀಗೆಯೇ ಆಗಿರುತ್ತದೆ. ನಿಶ್ಚಯವಾಗಿಯೂ ಅವನ ಹಿಡಿತವು ವೇದನಾಭರಿತ ಮತ್ತು ಕಠೋರವಾಗಿದೆ." [ಸೂರ ಹೂದ್: 102]

فوائد الحديث

ಬುದ್ಧಿವಂತರು ಪಶ್ಚಾತ್ತಾಪ ಪಡಲು ಆತುರಪಡಬೇಕು ಮತ್ತು ಅನ್ಯಾಯದಲ್ಲಿ ಮುಂದುವರಿಯಬಾರದೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅಲ್ಲಾಹು ಯಾವಾಗ ಹೇಗೆ ಹಿಡಿದು ಶಿಕ್ಷಿಸುತ್ತಾನೆಂದು ಯಾರಿಗೂ ತಿಳಿದಿರುವುದಿಲ್ಲ.

ಸರ್ವಶಕ್ತನಾದ ಅಲ್ಲಾಹು ಅನ್ಯಾಯವೆಸಗುವವರನ್ನು ಹಂತ ಹಂತವಾಗಿ ಆವರಿಸಿಕೊಳ್ಳುವುದಕ್ಕಾಗಿ ಮತ್ತು ಅವರು ಪಶ್ಚಾತಾಪ ಪಡದಿದ್ದರೆ ಅವರಿಗೆ ಇಮ್ಮಡಿ ಶಿಕ್ಷೆ ನೀಡುವುದಕ್ಕಾಗಿ ಅವರಿಗೆ ಕಾಲಾವಕಾಶ ನೀಡುತ್ತಾನೆ ಮತ್ತು ಅವರನ್ನು ಶಿಕ್ಷಿಸಲು ಆತುರ ಪಡುವುದಿಲ್ಲ.

ಅನೇಕ ಸಮುದಾಯಗಳಿಗೆ ಅಲ್ಲಾಹು ಶಿಕ್ಷೆ ನೀಡಲು ಅವರ ಅನ್ಯಾಯಗಳೇ ಕಾರಣವಾಗಿವೆ.

ಅಲ್ಲಾಹು ಒಂದು ಊರನ್ನು ನಾಶಪಡಿಸಿದರೆ, ಆ ಊರಿನಲ್ಲಿ ಧರ್ಮನಿಷ್ಠರು ಕೂಡ ಇರಬಹುದು. ಇವರು ಪುನರುತ್ಥಾನ ದಿನದಂದು ಅವರ ಧರ್ಮನಿಷ್ಠೆಯ ಆಧಾರದಲ್ಲಿ ಪ್ರತಿಫಲವನ್ನು ಪಡೆಯುತ್ತಾರೆ. ಶಿಕ್ಷೆಯಲ್ಲಿ ಅವರು ಒಳಗೊಂಡಿರುವುದು ಅವರಿಗೆ ಯಾವುದೇ ತೊಂದರೆ ಮಾಡುವುದಿಲ್ಲ.

التصنيفات

The Creed, Oneness of Allah's Names and Attributes, Blameworthy Morals