Fasting

9- ಒಮ್ಮೆ ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಬ್ಬ ವ್ಯಕ್ತಿ ಒಂಟೆಯಲ್ಲಿ ಸವಾರಿ ಮಾಡುತ್ತಾ ಅಲ್ಲಿಗೆ ಬಂದರು. ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿಹಾಕಿದರು. ನಂತರ ನಮ್ಮೊಡನೆ ಕೇಳಿದರು: "ನಿಮ್ಮಲ್ಲಿ ಮುಹಮ್ಮದ್ ಯಾರು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಒರಗಿ ಕುಳಿತಿದ್ದರು. ನಾವು ಹೇಳಿದೆವು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಪ್ರವಾದಿಯವರು, "ನಾನು ನಿನಗೆ ಉತ್ತರ ನೀಡಲು ಇಲ್ಲಿದ್ದೇನೆ" ಎಂದು ಉತ್ತರಿಸಿದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಆಗ ಪ್ರವಾದಿಯವರು ಹೇಳಿದರು: "ನಿಮಗೆ ಕೇಳಲಿರುವುದನ್ನು ಕೇಳಿ." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಸಂಪೂರ್ಣ ಮನುಕುಲದ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಆ ವ್ಯಕ್ತಿ ಹೇಳಿದರು: "ತಾವು ತಂದ ಸಂದೇಶದಲ್ಲಿ ನಾನು ವಿಶ್ವಾಸವಿಟ್ಟಿದ್ದೇನೆ. ನಾನು ನನ್ನ ಗೋತ್ರದ ದೂತನಾಗಿ ಇಲ್ಲಿಗೆ ಬಂದಿದ್ದೇನೆ. @ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ."