Family Jurisprudence

Family Jurisprudence

8- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನವನ್ನು (ಖುತ್ಬತುಲ್ ಹಾಜ) ಕಲಿಸಿಕೊಟ್ಟರು*: "ನಿಶ್ಚಯವಾಗಿಯೂ ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ನಾವು ಅವನಲ್ಲಿ ಸಹಾಯ ಬೇಡುತ್ತೇವೆ ಮತ್ತು ಅವನಲ್ಲಿ ಕ್ಷಮೆ ಯಾಚಿಸುತ್ತೇವೆ. ನಮ್ಮ ಶರೀರಗಳ ಕೆಡುಕುಗಳಿಂದ ನಾವು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇವೆ. ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ. "ಓ ಜನರೇ! ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡಿರಿ. ಅವನು ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿದನು. ಅವರಿಬ್ಬರಿಂದ ಅನೇಕ ಪುರುಷರನ್ನು ಮತ್ತು ಸ್ತ್ರೀಯರನ್ನು ಹಬ್ಬಿಸಿದನು. ಯಾರ ಬಗ್ಗೆ ನೀವು ಪರಸ್ಪರ ಕೇಳುತ್ತಿರುವಿರೋ ಆ ಅಲ್ಲಾಹನನ್ನು ಮತ್ತು ಕುಟುಂಬ ಸಂಬಂಧಗಳನ್ನು ಭಯಪಡಿರಿ. ಅಲ್ಲಾಹು ನಿಮ್ಮನ್ನು ಸದಾ ಗಮನಿಸುತ್ತಲೇ ಇದ್ದಾನೆ." [ನಿಸಾಅ್‌ 1]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲೇ ಭಯಪಡಿರಿ. ಮುಸ್ಲಿಮರಾಗಿಯೇ ಹೊರತು ನೀವು ಮರಣಹೊಂದುವಂತಾಗದಿರಲಿ." [ಆಲು ಇಮ್ರಾನ್:102]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತನ್ನೇ ಆಡಿರಿ. ಅವನು ನಿಮ್ಮ ಕರ್ಮಗಳನ್ನು ಸರಿಪಡಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಮಹಾ ವಿಜಯವನ್ನು ಪಡೆದನು." [ಅಹ್‌ಝಾಬ್:70-71].

12- “ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು.* ಆಡಳಿತಗಾರನು ಜನರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಪುರುಷನು ತನ್ನ ಮನೆಯವರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಮಹಿಳೆ ತನ್ನ ಗಂಡನ ಮನೆಗೆ ಮತ್ತು ಅವನ ಮಕ್ಕಳಿಗೆ ಕುರಿಗಾಹಿಯಾಗಿದ್ದಾಳೆ ಮತ್ತು ಅವರಿಗೆ ಅವಳೇ ಜವಾಬ್ದಾರಳಾಗಿದ್ದಾಳೆ. ಗುಲಾಮನು ತನ್ನ ಯಜಮಾನನ ಆಸ್ತಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅದಕ್ಕೆ ಅವನೇ ಜವಾಬ್ದಾರನಾಗಿದ್ದಾನೆ. ತಿಳಿಯಿರಿ! ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು."

15- "ಒಬ್ಬ ಮಹಿಳೆ ತನ್ನ ಜೊತೆಗೆ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದೆ ಎರಡು ದಿನಗಳಷ್ಟು ದೂರದ ಪ್ರಯಾಣ ಮಾಡಬಾರದು.* ಎರಡು ದಿನಗಳಲ್ಲಿ—ಈದುಲ್-ಫಿತ್ರ್ ಮತ್ತು ಈದುಲ್-ಅದ್‌ಹಾ—ಉಪವಾಸ ಆಚರಿಸಬಾರದು. ಫಜ್ರ್ ನಮಾಝಿನ ನಂತರ ಸೂರ್ಯೋದಯದವರೆಗೆ ಮತ್ತು ಅಸರ್ ನಮಾಝಿನ ನಂತರ ಸೂರ್ಯಾಸ್ತದವರೆಗೆ ಬೇರೆ ನಮಾಝ್ ಮಾಡಬಾರದು. ಮೂರು ಮಸೀದಿಗಳನ್ನು ಹೊರತುಪಡಿಸಿ ಬೇರೆಲ್ಲಿಗೂ ಯಾತ್ರೆ ಹೋಗಬಾರದು — ಮಸ್ಜಿದುಲ್-ಹರಾಂ, ಮಸ್ಜಿದುಲ್-ಅಕ್ಸಾ ಮತ್ತು ನನ್ನ ಈ ಮಸೀದಿ (‌ಮಸ್ಜಿದು-ನ್ನಬವಿ)."