Da‘wah and Hisbah

Da‘wah and Hisbah

1- "ಕಷ್ಟದಲ್ಲೂ, ಸುಖದಲ್ಲೂ, ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ, ನಮಗಿಂತ ಇತರರಿಗೆ ಆದ್ಯತೆ ನೀಡಿದರೂ ನಾವು ನಿಮ್ಮ ಮಾತನ್ನು ಕೇಳುತ್ತೇವೆ ಮತ್ತು ಅನುಸರಿಸುತ್ತೇವೆ* ಎಂದು ನಾವು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರಮಾಣ ಮಾಡಿದೆವು. ಅದೇ ರೀತಿ, ಅಧಿಕಾರದಲ್ಲಿರುವವರ ವಿಷಯದಲ್ಲಿ ನಾವು ವಿರೋಧ ವ್ಯಕ್ತಪಡಿಸುವುದಿಲ್ಲ, ನಾವು ಎಲ್ಲೇ ಇದ್ದರೂ ಸತ್ಯವನ್ನೇ ಹೇಳುತ್ತೇವೆ, ಮತ್ತು ಅಲ್ಲಾಹನ ವಿಷಯದಲ್ಲಿ ನಾವು ಯಾವುದೇ ವಿಮರ್ಶಕನ ಮಾತುಗಳಿಗೆ ಹೆದರುವುದಿಲ್ಲ ಎಂದು ನಾವು ನಿಷ್ಠೆಯ ಪ್ರಮಾಣ ಮಾಡಿದೆವು."

8- "ಯಾರು ಆಜ್ಞಾಪಾಲನೆಯಿಂದ ಹಿಂದೆ ಸರಿದು, ಸಮಾಜದಿಂದ ಬೇರ್ಪಟ್ಟು, ಅದೇ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾನೋ, ಅವನು ಅಜ್ಞಾನಕಾಲದ ಸಾವನ್ನಪ್ಪಿದ್ದಾನೆ.* ಯಾರು ಅಂಧ ಪತಾಕೆಯ ಅಡಿಯಲ್ಲಿ ಯುದ್ಧ ಮಾಡುತ್ತಾ, ಜನಾಂಗೀಯತೆಗಾಗಿ ಕೋಪಗೊಳ್ಳುತ್ತಲೂ, ಜನಾಂಗೀಯತೆಯ ಕಡೆಗೆ ಕರೆಯುತ್ತಲೂ, ಜನಾಂಗೀಯತೆಯನ್ನು ಬೆಂಬಲಿಸುತ್ತಲೂ ಇರುತ್ತಾ ಅದೇ ಸ್ಥಿತಿಯಲ್ಲಿ ಸಾಯುತ್ತಾನೋ, ಅವನು ಅಜ್ಞಾನಕಾಲದ ಸಾವನ್ನಪ್ಪಿದ್ದಾನೆ. ಯಾರು ನನ್ನ ಸಮುದಾಯದ ವಿರುದ್ಧ ಬಂಡೆದ್ದು, ಅವರಲ್ಲಿರುವ ನೀತಿವಂತರಿಗೂ ದುಷ್ಟರಿಗೂ ಬಡಿಯುತ್ತಾನೋ, ಅವರಲ್ಲಿರುವ ಸತ್ಯವಿಶ್ವಾಸಿಗಳನ್ನು ಕೂಡ ಬಿಟ್ಟುಬಿಡುವುದಿಲ್ಲವೋ, ಮತ್ತು ಕರಾರು ಮಾಡಿಕೊಂಡವರ ಕರಾರನ್ನು ಸಹ ನೆರವೇರಿಸುವುದಿಲ್ಲವೋ, ಅವನು ನನಗೆ ಸೇರಿದವನಲ್ಲ ಮತ್ತು ನಾನು ಅವನಿಗೆ ಸೇರಿದವನಲ್ಲ."

17- "ಸೂರ್ಯ ಉದಯವಾಗುವ ಎಲ್ಲಾ ದಿನಗಳಲ್ಲೂ ಮನುಷ್ಯನ ದೇಹದ ಎಲ್ಲಾ ಸಂಧಿಗಳಿಗೂ ದಾನ ನೀಡಬೇಕಾಗಿದೆ.* ಇಬ್ಬರು ಮನುಷ್ಯರ ನಡುವೆ ನ್ಯಾಯ ಪಾಲಿಸುವುದು ದಾನವಾಗಿದೆ. ಒಬ್ಬ ವ್ಯಕ್ತಿಗೆ ಅವನ ಸವಾರಿಯನ್ನೇರಲು ಸಹಾಯ ಮಾಡುವುದು ಅಥವಾ ಅವನ ಸಾಮಾನುಗಳನ್ನು ಎತ್ತಿ ಅದರ ಮೇಲಿಡುವುದು ದಾನವಾಗಿದೆ. ಉತ್ತಮವಾದ ಮಾತು ದಾನವಾಗಿದೆ. ನಮಾಝ್ ನಿರ್ವಹಿಸುವುದಕ್ಕಾಗಿ ಇಡುವ ಪ್ರತಿಯೊಂದು ಹೆಜ್ಜೆಯೂ ದಾನವಾಗಿದೆ. ರಸ್ತೆಯಿಂದ ತೊಂದರೆಗಳನ್ನು ನಿವಾರಿಸುವುದು ದಾನವಾಗಿದೆ."

20- “ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು.* ಆಡಳಿತಗಾರನು ಜನರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಪುರುಷನು ತನ್ನ ಮನೆಯವರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಮಹಿಳೆ ತನ್ನ ಗಂಡನ ಮನೆಗೆ ಮತ್ತು ಅವನ ಮಕ್ಕಳಿಗೆ ಕುರಿಗಾಹಿಯಾಗಿದ್ದಾಳೆ ಮತ್ತು ಅವರಿಗೆ ಅವಳೇ ಜವಾಬ್ದಾರಳಾಗಿದ್ದಾಳೆ. ಗುಲಾಮನು ತನ್ನ ಯಜಮಾನನ ಆಸ್ತಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅದಕ್ಕೆ ಅವನೇ ಜವಾಬ್ದಾರನಾಗಿದ್ದಾನೆ. ತಿಳಿಯಿರಿ! ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು."

22- ಒಮ್ಮೆ ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಬ್ಬ ವ್ಯಕ್ತಿ ಒಂಟೆಯಲ್ಲಿ ಸವಾರಿ ಮಾಡುತ್ತಾ ಅಲ್ಲಿಗೆ ಬಂದರು. ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿಹಾಕಿದರು. ನಂತರ ನಮ್ಮೊಡನೆ ಕೇಳಿದರು: "ನಿಮ್ಮಲ್ಲಿ ಮುಹಮ್ಮದ್ ಯಾರು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಒರಗಿ ಕುಳಿತಿದ್ದರು. ನಾವು ಹೇಳಿದೆವು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಪ್ರವಾದಿಯವರು, "ನಾನು ನಿನಗೆ ಉತ್ತರ ನೀಡಲು ಇಲ್ಲಿದ್ದೇನೆ" ಎಂದು ಉತ್ತರಿಸಿದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಆಗ ಪ್ರವಾದಿಯವರು ಹೇಳಿದರು: "ನಿಮಗೆ ಕೇಳಲಿರುವುದನ್ನು ಕೇಳಿ." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಸಂಪೂರ್ಣ ಮನುಕುಲದ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಆ ವ್ಯಕ್ತಿ ಹೇಳಿದರು: "ತಾವು ತಂದ ಸಂದೇಶದಲ್ಲಿ ನಾನು ವಿಶ್ವಾಸವಿಟ್ಟಿದ್ದೇನೆ. ನಾನು ನನ್ನ ಗೋತ್ರದ ದೂತನಾಗಿ ಇಲ್ಲಿಗೆ ಬಂದಿದ್ದೇನೆ. @ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ."

23- "ಮಕ್ಕಾ ವಿಜಯದ ದಿನದಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ಹೇಳಿದರು: "@ಓ ಜನರೇ! ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ದರ್ಪ ಮತ್ತು ಪೂರ್ವಜರ ಹೆಸರಿನಲ್ಲಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ*. ಜನರಲ್ಲಿ ಎರಡು ವಿಧಗಳಿವೆ: ಅಲ್ಲಾಹನ ಗೌರವಕ್ಕೆ ಪಾತ್ರರಾದ ಧರ್ಮನಿಷ್ಠ, ನೀತಿವಂತ ಜನರು ಮತ್ತು ಅಲ್ಲಾಹು ತುಚ್ಛವಾಗಿ ಪರಿಗಣಿಸುವ ಕೆಟ್ಟ, ನತದೃಷ್ಟ ಜನರು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಅಲ್ಲಾಹು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ಅಲ್ಲಾಹು ಹೇಳುತ್ತಾನೆ: "ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ." [ಹುಜುರಾತ್ 13]."