Virtues

5- "ಹಲಾಲ್ ಅತ್ಯಂತ ಸ್ಪಷ್ಟವಾಗಿದೆ ಮತ್ತು ಹರಾಮ್ ಕೂಡ ಅತ್ಯಂತ ಸ್ಪಷ್ಟವಾಗಿದೆ*. ಇವೆರಡರ ಮಧ್ಯೆ ಸಂಶಯಾಸ್ಪದ ವಿಷಯಗಳಿವೆ. ಜನರಲ್ಲಿ ಹೆಚ್ಚಿನವರಿಗೂ ಅವುಗಳ ಬಗ್ಗೆ ಜ್ಞಾನವಿಲ್ಲ. ಯಾರು ಈ ಸಂಶಯಾಸ್ಪದ ವಿಷಯಗಳಿಂದ ದೂರವಿರುತ್ತಾನೋ, ಅವನು ತನ್ನ ಧರ್ಮ ಮತ್ತು ಘನತೆಯನ್ನು ಕಾಪಾಡಿಕೊಂಡನು. ಯಾರು ಈ ಸಂಶಯಾಸ್ಪದ ವಿಷಯಗಳಲ್ಲಿ ಒಳಪಡುತ್ತಾನೋ ಅವನು ಹರಾಮ್‌ನಲ್ಲಿ ಒಳಪಡುತ್ತಾನೆ. ಅವನ ಸ್ಥಿತಿಯು (ಪ್ರವೇಶಾನುಮತಿಯಿಲ್ಲದ) ಹುಲ್ಲುಗಾವಲಿನ ಅಂಚಿನಲ್ಲಿ ತನ್ನ ಕುರಿಮಂದೆಯನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಅವನ ಕುರಿಗಳು ಹುಲ್ಲುಗಾವಲಿನೊಳಗೆ ನುಗ್ಗಿ ಮೇಯುವ ಸಾಧ್ಯತೆಯಿದೆ. ಎಚ್ಚರಾ! ಪ್ರತಿಯೊಬ್ಬ ರಾಜನಿಗೂ ಒಂದು (ನಿಷೇಧಿತ) ವಲಯವಿದೆ. ಎಚ್ಚರಾ! ಅಲ್ಲಾಹು ನಿಷೇಧಿಸಿದ ಕಾರ್ಯಗಳು ಅವನ (ನಿಷೇಧಿತ) ವಲಯವಾಗಿದೆ. ಎಚ್ಚರಾ! ದೇಹದಲ್ಲಿ ಒಂದು ಮಾಂಸದ ತುಂಡಿದೆ. ಅದು ಸರಿಯಾದರೆ ಸಂಪೂರ್ಣ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಸಂಪೂರ್ಣ ದೇಹವು ಕೆಡುತ್ತದೆ. ಎಚ್ಚರಾ! ಅದು ಹೃದಯವಾಗಿದೆ."

14- "ಯಾರು ಹತ್ತು ಬಾರಿ — ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ) ಎಂದು ಹೇಳುತ್ತಾನೋ*, ಅವನು ಇಸ್ಮಾಯೀಲರ ಸಂತಾನದಲ್ಲಿ ಸೇರಿದ ನಾಲ್ಕು ಗುಲಾಮರನ್ನು ವಿಮೋಚನೆಗೊಳಿಸಿದವನಂತೆ ಆಗುತ್ತಾನೆ."

17- ಒಮ್ಮೆ ಮುಆದ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಾಗ ಅವರು ಕರೆದರು: "ಓ ಮುಆದ್ ಬಿನ್ ಜಬಲ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಅವರು ಕರೆದರು: "ಓ ಮುಆದ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಹೀಗೆ ಅವರು ಮೂರು ಬಾರಿ ಕರೆದರು. ನಂತರ ಹೇಳಿದರು: "@ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ.*" ಮುಆದ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಜನರಿಗೆ ಸಂತೋಷವಾಗುವ ಈ ಸುದ್ದಿಯನ್ನು ನಾನು ಅವರಿಗೆ ತಿಳಿಸಲೇ?" ಅವರು ಹೇಳಿದರು: "ಬೇಡ, ಅವರು ಅದರ ಮೇಲೆ ಅವಲಂಬಿತರಾಗುವರು." (ಜ್ಞಾನವನ್ನು ಬಚ್ಚಿಟ್ಟ) ಪಾಪಕ್ಕೆ ಗುರಿಯಾಗದಿರಲು ಮುಆದ್ ಮರಣದ ಸಮಯದಲ್ಲಿ ಇದನ್ನು ಜನರಿಗೆ ತಿಳಿಸಿದರು.

19- ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! (ಸ್ವರ್ಗ ಮತ್ತು ನರಕವನ್ನು) ಕಡ್ಡಾಯಗೊಳಿಸುವ ಎರಡು ವಿಷಯಗಳು ಯಾವುವು?" ಅವರು ಉತ್ತರಿಸಿದರು: "@ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುವವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಅಲ್ಲಾಹನೊಡನೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುವವರು ನರಕವನ್ನು ಪ್ರವೇಶಿಸುತ್ತಾರೆ."

20- "ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು*. ನಂತರ ಅವನ ಮುಂದೆ ತೊಂಬತ್ತೊಂಬತ್ತು ಸುರುಳಿಗಳನ್ನು ಇಡುವನು. ಪ್ರತಿಯೊಂದು ಸುರುಳಿಯೂ ದೃಷ್ಟಿ ತಲುಪುವಷ್ಟು ದೂರದವರೆಗೆ ಹರಡಿಕೊಂಡಿರುವುದು. ನಂತರ ಅವನು (ಅಲ್ಲಾಹು) ಕೇಳುವನು: "ಇವುಗಳಲ್ಲಿ ಯಾವುದನ್ನಾದರೂ ನೀನು ನಿರಾಕರಿಸುವೆಯಾ? ಕರ್ಮಗಳನ್ನು ದಾಖಲಿಸುವ ನನ್ನ ದೂತರು ನಿನಗೇನಾದರೂ ಅನ್ಯಾಯ ಮಾಡಿದ್ದಾರೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿನಗೆ ಹೇಳಲು ಏನಾದರೂ ನೆಪವಿದೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿಶ್ಚಯವಾಗಿಯೂ ನಮ್ಮ ಬಳಿ ನಿನಗೆ ಒಂದು ಒಳಿತಿದೆ. (ಹೆದರಬೇಡ), ಇಂದು ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಅವನು, "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ" ಎಂದು ಬರೆಯಲಾದ ಒಂದು ಚೀಟಿಯನ್ನು ಹೊರತೆಗೆಯುವನು. ನಂತರ ಅವನು ಹೇಳುವನು: "ನಿನ್ನ ತಕ್ಕಡಿಯನ್ನು ಇಲ್ಲಿಗೆ ತಾ." ಆ ವ್ಯಕ್ತಿ ಕೇಳುವನು: "ಓ ನನ್ನ ಪರಿಪಾಲಕನೇ! ಈ ಸುರುಳಿಗಳಿಗೆ ಹೋಲಿಸಿದರೆ ಈ ಚೀಟಿ ಎಷ್ಟು ತೂಗಬಹುದು?" ಆಗ ಅಲ್ಲಾಹು ಹೇಳುವನು: "(ಹೆದರಬೇಡ), ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ಆ ಸುರಳಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಮತ್ತು ಈ ಚೀಟಿಯನ್ನು ಇನ್ನೊಂದು ತಟ್ಟೆಯಲ್ಲಿ ಇಡಲಾಗುವುದು. ಆಗ ಸುರುಳಿಗಳು ಹಗುರವಾಗಿ ಚೀಟಿ ಭಾರವಾಗುವುದು. ಅಲ್ಲಾಹನ ಹೆಸರಿಗಿಂತಲೂ ಹೆಚ್ಚು ಭಾರವಾದದ್ದು ಯಾವುದೂ ಇಲ್ಲ."

22- "ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ*, ಮುಅಝ್ಝಿನ್ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಸ್ಸಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಲ್ ಫಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ, ಮುಅಝ್ಝಿನ್ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."

25- "ಪುರುಷನು ಖರ್ಚು ಮಾಡುವ ಅತಿಶ್ರೇಷ್ಠ ದೀನಾರ್ ಎಂದರೆ ಅವನು ತನ್ನ ಕುಟುಂಬಕ್ಕಾಗಿ ಖರ್ಚು ಮಾಡುವ ದೀನಾರ್, ಪುರುಷನು ಅಲ್ಲಾಹನ ಮಾರ್ಗದಲ್ಲಿ ತನ್ನ ಸವಾರಿಗಾಗಿ ಖರ್ಚು ಮಾಡುವ ದೀನಾರ್, ಮತ್ತು ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಸಹಚರರಿಗಾಗಿ ಖರ್ಚು ಮಾಡುವ ದೀನಾರ್."* ಅಬೂ ಕಿಲಾಬ ಹೇಳಿದರು: "ಅವರು ಕುಟುಂಬದಿಂದ ಆರಂಭಿಸಿದರು." ನಂತರ ಅಬೂ ಕಿಲಾಬ ಹೇಳಿದರು: "ತನ್ನ ಕುಟುಂಬದ ಕಿರಿಯ ಸದಸ್ಯರಿಗಾಗಿ ಖರ್ಚು ಮಾಡುವ ಪುರುಷನಿಗಿಂತ ಹೆಚ್ಚು ಪ್ರತಿಫಲ ಪಡೆಯುವವರು ಯಾರಿದ್ದಾರೆ? ಅವನ ಮೂಲಕ ಅಲ್ಲಾಹು ಅವರನ್ನು ಪರಿಶುದ್ಧರನ್ನಾಗಿ ಮಾಡುತ್ತಾನೆ ಅಥವಾ ಅವರಿಗೆ ಪ್ರಯೋಜನವನ್ನು ನೀಡುತ್ತಾನೆ ಮತ್ತು ಅವರನ್ನು ಶ್ರೀಮಂತಗೊಳಿಸುತ್ತಾನೆ."

30- "ನಾಳೆ ನಾನು ಈ ಪತಾಕೆಯನ್ನು ಒಬ್ಬ ವ್ಯಕ್ತಿಗೆ ಕೊಡುವೆನು. ಅವನ ಕೈಯಿಂದ ಅಲ್ಲಾಹು ವಿಜಯವನ್ನು ದಯಪಾಲಿಸುವನು. ಅವನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುತ್ತಾನೆ ಮತ್ತು ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವನನ್ನು ಪ್ರೀತಿಸುತ್ತಾರೆ." ಪತಾಕೆ ಯಾರ ಕೈಗೆ ಕೊಡಲಾಗಬಹುದು ಎಂದು ಮಾತನಾಡುತ್ತಾ ಜನರು ಆ ರಾತ್ರಿಯನ್ನು ಕಳೆದರು. ಬೆಳಗಾದಾಗ, ಜನರೆಲ್ಲರೂ ಅದನ್ನು ತಮ್ಮ ಕೈಗೆ ಕೊಡಲಾಗಬಹುದೆಂಬ ನಿರೀಕ್ಷೆಯಿಂದ ಬೆಳಗ್ಗೆಯೇ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತೆರಳಿದರು. ಅವರು (ಪ್ರವಾದಿ) ಕೇಳಿದರು: "ಅಲೀ ಬಿನ್ ಅಬೂ ತಾಲಿಬ್ ಎಲ್ಲಿ?" ಅವರು ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಕಣ್ಣ ನೋವಿನಿಂದ ಬಳಲುತ್ತಿದ್ದಾರೆ." ಅವರು ಹೇಳಿದರು: "ಅವನ ಬಳಿಗೆ ಜನರನ್ನು ಕಳುಹಿಸಿ." ಅವರು ಬಂದಾಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಎರಡು ಕಣ್ಣುಗಳಿಗೆ ಉಗಿದು ಪ್ರಾರ್ಥಿಸಿದರು. ಆಗ ಅವರ ಕಣ್ಣಿನಲ್ಲಿ ಯಾವುದೇ ನೋವಿರಲಿಲ್ಲವೋ ಎಂಬಂತೆ ಅದು ಗುಣವಾಯಿತು. ಅವರು ಪತಾಕೆಯನ್ನು ಅವರಿಗೆ ಕೊಟ್ಟರು. ಅಲಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ನಮ್ಮಂತೆ ಆಗುವ ತನಕ ನಾನು ಅವರೊಂದಿಗೆ ಯುದ್ಧ ಮಾಡಬೇಕೇ?" ಅವರು ಉತ್ತರಿಸಿದರು: "ಅವರ ಅಂಗಳವನ್ನು ತಲುಪುವ ತನಕ ಸಾವಧಾನದಿಂದ ಮುಂದುವರಿಯಿರಿ. ನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಕರೆಯಿರಿ. ಅಲ್ಲಾಹನ ಹಕ್ಕಿಗೆ ಸಂಬಂಧಿಸಿದಂತೆ ಅವರಿಗೆ ಏನು ಕಡ್ಡಾಯವಾಗಿದೆಯೆಂಬುದನ್ನು ತಿಳಿಸಿಕೊಡಿ.@ಏಕೆಂದರೆ, ಅಲ್ಲಾಹನಾಣೆ! ಅಲ್ಲಾಹು ನಿನ್ನ ಮೂಲಕ ಒಬ್ಬ ವ್ಯಕ್ತಿಗೆ ಸನ್ಮಾರ್ಗವನ್ನು ಕರುಣಿಸುವುದು ನಿನಗೆ ಕೆಂಪು ಒಂಟೆಗಳಿರುವುದಕ್ಕಿಂತಲೂ ಶ್ರೇಷ್ಠವಾಗಿದೆ."

33- "ನಿಮ್ಮ ಕರ್ಮಗಳಲ್ಲಿ ಶ್ರೇಷ್ಠವಾದ, ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಪರಿಶುದ್ಧವಾದ, ನಿಮ್ಮ ಪದವಿಗಳಲ್ಲಿ ಅತಿ ಎತ್ತರವಾದ, ಚಿನ್ನ ಮತ್ತು ಬೆಳ್ಳಿಯನ್ನು ವ್ಯಯಿಸುವುದಕ್ಕಿಂತಲೂ ಉತ್ತಮವಾದ, ನೀವು ನಿಮ್ಮ ಶತ್ರುವಿನೊಂದಿಗೆ ಹೋರಾಡಿ ನೀವು ಅವರನ್ನು ಮತ್ತು ಅವರು ನಿಮ್ಮನ್ನು ಕೊಲ್ಲುವುದಕ್ಕಿಂತಲೂ ಉತ್ತಮವಾದ ಒಂದು ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ?"* ಅವರು ಹೇಳಿದರು: "ತಿಳಿಸಿಕೊಡಿ." ಅವರು (ಪ್ರವಾದಿ) ಹೇಳಿದರು: "ಅಲ್ಲಾಹನ ಸ್ಮರಣೆ."

35- ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದ ದಾರಿಯಲ್ಲಿ ಚಲಿಸುತ್ತಿದ್ದರು. ಅವರು ಜುಮ್ದಾನ್ ಎಂಬ ಹೆಸರಿನ ಪರ್ವತದ ಬಳಿಯಿಂದ ಸಾಗಿದಾಗ ಹೇಳಿದರು: "ಮುಂದುವರಿಯಿರಿ. ಇದು ಜುಮ್ದಾನ್. @ಮುಫರ್‍ರಿದ್‌ಗಳು (ಅನನ್ಯರು) ಮುಂಚೂಣಿಯಲ್ಲಿದ್ದಾರೆ.*" ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಮುಫರ್‍ರಿದ್‌ಗಳು ಎಂದರೇನು?" ಅವರು ಉತ್ತರಿಸಿದರು: "ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವ ಪುರುಷರು ಮತ್ತು ಸ್ತ್ರೀಯರು."

44- "ಅಲ್ಲಾಹು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ.* ಆ ನೇರ ಮಾರ್ಗದ ಎರಡು ಬದಿಗಳಲ್ಲೂ ಗೋಡೆಗಳಿವೆ. ಆ ಗೋಡೆಗಳಲ್ಲಿ ತೆರೆದುಕೊಂಡಿರುವ ಅನೇಕ ಬಾಗಿಲುಗಳಿವೆ. ಆ ಬಾಗಿಲುಗಳಲ್ಲಿ ಪರದೆಗಳನ್ನು ಹಾಕಲಾಗಿದೆ. ಆ ನೇರ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಕೂಗಿ ಹೇಳುತ್ತಿರುತ್ತಾನೆ: "ಓ ಜನರೇ! ನೀವೆಲ್ಲರೂ ನೇರ ಮಾರ್ಗವನ್ನು ಪ್ರವೇಶಿರಿ. ಅತ್ತಿತ್ತ ತಿರುಗದೆ ನೇರವಾಗಿ ನಡೆಯಿರಿ." ಆ ಮಾರ್ಗದ ಮೇಲ್ಭಾಗದಲ್ಲಿ ಒಬ್ಬ ವ್ಯಕ್ತಿಯಿದ್ದು, ಆ ಬಾಗಿಲುಗಳಲ್ಲಿ ಯಾವುದಾದರೂ ಬಾಗಿಲನ್ನು ತೆರೆಯಲು ಪ್ರಯತ್ನಿಸಿದರೆ, ಅವನು ಕೂಗಿ ಹೇಳುತ್ತಾನೆ: "ನಿನಗೆ ದುರದೃಷ್ಟ ಕಾದಿದೆ! ಆ ಬಾಗಿಲನ್ನು ತೆರೆಯಬೇಡ. ನೀನು ಅದನ್ನು ತೆರೆದರೆ ಅದರ ಒಳಗೆ ಪ್ರವೇಶಿಸಿ ಬಿಡುವೆ." ಆ ನೇರ ಮಾರ್ಗವು ಇಸ್ಲಾಂ ಧರ್ಮವಾಗಿದೆ. ಆ ಎರಡು ಗೋಡೆಗಳು ಅಲ್ಲಾಹನ ಎಲ್ಲೆಗಳಾಗಿವೆ. ತೆರೆದುಕೊಂಡಿರುವ ಬಾಗಿಲುಗಳು ಅಲ್ಲಾಹು ನಿಷೇಧಿತ ವಲಯಗಳಾಗಿವೆ. ಆ ನೇರ ಮಾರ್ಗದ ಪ್ರವೇಶದ್ವಾರದಲ್ಲಿ ಕೂಗಿ ಕರೆಯುವುದು ಅಲ್ಲಾಹನ ಗ್ರಂಥವಾಗಿದೆ. ಆ ಮಾರ್ಗದ ಮೇಲ್ಭಾಗದಿಂದ ಕೂಗಿ ಕರೆಯುವುದು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿರುವ ಅಲ್ಲಾಹನ ಉಪದೇಶಕವಾಗಿದೆ."

54- "ಯಾರು ಒಬ್ಬ ಸತ್ಯವಿಶ್ವಾಸಿಯಿಂದ ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ನಿವಾರಿಸುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಅವನಿಂದ ನಿವಾರಿಸುತ್ತಾನೆ.* ಯಾರು ಕಷ್ಟದಲ್ಲಿರುವವರಿಗೆ ಸುಲಭಗೊಳಿಸುತ್ತಾನೋ, ಅಲ್ಲಾಹು ಅವನಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸುಲಭಗೊಳಿಸುತ್ತಾನೆ. ಯಾರು ಒಬ್ಬ ಮುಸ್ಲಿಮನ ನ್ಯೂನತೆಗಳನ್ನು ಮುಚ್ಚಿಡುತ್ತಾನೋ, ಅಲ್ಲಾಹು ಅವನ ನ್ಯೂನತೆಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಮುಚ್ಚಿಡುತ್ತಾನೆ. ದಾಸನು ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವ ತನಕ ಅಲ್ಲಾಹನು ದಾಸನಿಗೆ ಸಹಾಯ ಮಾಡುತ್ತಾನೆ. ಯಾರು ಜ್ಞಾನವನ್ನು ಹುಡುಕುತ್ತಾ ಒಂದು ದಾರಿಯನ್ನು ತುಳಿಯುತ್ತಾನೋ, ಅಲ್ಲಾಹು ಅವನಿಗೆ ಸ್ವರ್ಗಕ್ಕೆ ದಾರಿಯನ್ನು ಸುಲಭಗೊಳಿಸುತ್ತಾನೆ. ಒಂದು ಗುಂಪು ಜನರು ಅಲ್ಲಾಹನ ಮನೆಗಳ (ಮಸೀದಿಗಳ) ಪೈಕಿ ಒಂದರಲ್ಲಿ ಅಲ್ಲಾಹನ ಗ್ರಂಥವನ್ನು ಪಠಿಸಲು, ಮತ್ತು ಅದನ್ನು ತಮ್ಮ ನಡುವೆ ಅಧ್ಯಯನ ಮಾಡಲು ಒಟ್ಟುಗೂಡುತ್ತಾರೆ ಎಂದಾದರೆ, ಅವರ ಮೇಲೆ ಶಾಂತಿ ಇಳಿಯುತ್ತದೆ, ಕರುಣೆಯು ಅವರನ್ನು ಆವರಿಸುತ್ತದೆ, ದೇವದೂತರುಗಳು ಅವರನ್ನು ಸುತ್ತುವರಿಯುತ್ತಾರೆ ಮತ್ತು ಅಲ್ಲಾಹು ತನ್ನ ಹತ್ತಿರವಿರುವವರಿಗೆ ಅವರ ಬಗ್ಗೆ ತಿಳಿಸುತ್ತಾನೆ. ಯಾರ ಕರ್ಮಗಳು ಅವನನ್ನು ನಿಧಾನಗೊಳಿಸುತ್ತವೆಯೋ, ಅವನ ವಂಶವು ಅವನನ್ನು ಮುಂದಕ್ಕೆ ಒಯ್ಯುವುದಿಲ್ಲ."