Heart-Softeners and Sermons

Heart-Softeners and Sermons

1- "ಮಹಾಪಾಪಗಳಲ್ಲಿ ಅತಿದೊಡ್ಡ ಪಾಪದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?*" ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು. ಸಹಾಬಿಗಳು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನೊಡನೆ ಸಹಭಾಗಿತ್ವ ಮಾಡುವುದು ಮತ್ತು ತಂದೆ-ತಾಯಿಗೆ ಅವಿಧೇಯತೆ ತೋರುವುದು." ಒರಗಿ ಕುಳಿತಿದ್ದ ಅವರು ನೇರವಾಗಿ ಕುಳಿತು ಹೇಳಿದರು: "ಮತ್ತು ಸುಳ್ಳು ಹೇಳಿಕೆ ನೀಡುವುದು." "ಅವರು ಮೌನ ವಹಿಸಿದ್ದರೆ ಚೆನ್ನಾಗಿತ್ತು" ಎಂದು ನಾವು ಹೇಳುವ ತನಕ ಅವರು ಪುನರುಚ್ಛರಿಸುತ್ತಲೇ ಇದ್ದರು.

3- “ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ*” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.”

5- "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಅವನ ದಾಸ ಮತ್ತು ಸಂದೇಶವಾಹಕರಾಗಿದ್ದಾರೆ, ಯೇಸು (ಅವರ ಮೇಲೆ ಶಾಂತಿಯಿರಲಿ) ಅಲ್ಲಾಹನ ದಾಸರು, ಸಂದೇಶವಾಹಕರು ಮತ್ತು ಅಲ್ಲಾಹು ಮರ್ಯಮರಿಗೆ ಹಾಕಿಕೊಟ್ಟ ಅವನ ವಚನ ಮತ್ತು ಅವನ ವತಿಯ ಆತ್ಮವಾಗಿದ್ದಾರೆ, ಸ್ವರ್ಗ ಸತ್ಯವಾಗಿದೆ, ನರಕ ಸತ್ಯವಾಗಿದೆ ಎಂದು ಯಾರಾದರೂ ಸಾಕ್ಷ್ಯ ವಹಿಸಿದರೆ, @ಅವರ ಕರ್ಮಗಳು ಎಷ್ಟೇ ಕಡಿಮೆಯಾಗಿದ್ದರೂ ಸಹ ಅಲ್ಲಾಹು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವನು."

10- "ಇಬ್ಬರು ಮುಸ್ಲಿಮರು ತಮ್ಮ ಖಡ್ಗಗಳ ಮೂಲಕ ಪರಸ್ಪರ ಎದುರಾದರೆ, ಕೊಲೆಗಾರನು ಮತ್ತು ಕೊಲೆಯಾದವನು ಇಬ್ಬರೂ ನರಕಕ್ಕೆ ಹೋಗುತ್ತಾರೆ*." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಕೊಲೆಗಾರನು ನರಕಕ್ಕೆ ಹೋಗುವುದು ಸರಿ. ಆದರೆ ಕೊಲೆಯಾದವನು ಏಕೆ ನರಕಕ್ಕೆ ಹೋಗಬೇಕು?" ಅವರು ಉತ್ತರಿಸಿದರು: "ಏಕೆಂದರೆ ಅವನಿಗೆ ತನ್ನ ಎದುರಾಳಿಯನ್ನು ಕೊಲ್ಲಬೇಕೆಂಬ ಅತೀವ ಉತ್ಸಾಹವಿತ್ತು."

11- "ಹಲಾಲ್ ಅತ್ಯಂತ ಸ್ಪಷ್ಟವಾಗಿದೆ ಮತ್ತು ಹರಾಮ್ ಕೂಡ ಅತ್ಯಂತ ಸ್ಪಷ್ಟವಾಗಿದೆ*. ಇವೆರಡರ ಮಧ್ಯೆ ಸಂಶಯಾಸ್ಪದ ವಿಷಯಗಳಿವೆ. ಜನರಲ್ಲಿ ಹೆಚ್ಚಿನವರಿಗೂ ಅವುಗಳ ಬಗ್ಗೆ ಜ್ಞಾನವಿಲ್ಲ. ಯಾರು ಈ ಸಂಶಯಾಸ್ಪದ ವಿಷಯಗಳಿಂದ ದೂರವಿರುತ್ತಾನೋ, ಅವನು ತನ್ನ ಧರ್ಮ ಮತ್ತು ಘನತೆಯನ್ನು ಕಾಪಾಡಿಕೊಂಡನು. ಯಾರು ಈ ಸಂಶಯಾಸ್ಪದ ವಿಷಯಗಳಲ್ಲಿ ಒಳಪಡುತ್ತಾನೋ ಅವನು ಹರಾಮ್‌ನಲ್ಲಿ ಒಳಪಡುತ್ತಾನೆ. ಅವನ ಸ್ಥಿತಿಯು (ಪ್ರವೇಶಾನುಮತಿಯಿಲ್ಲದ) ಹುಲ್ಲುಗಾವಲಿನ ಅಂಚಿನಲ್ಲಿ ತನ್ನ ಕುರಿಮಂದೆಯನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಅವನ ಕುರಿಗಳು ಹುಲ್ಲುಗಾವಲಿನೊಳಗೆ ನುಗ್ಗಿ ಮೇಯುವ ಸಾಧ್ಯತೆಯಿದೆ. ಎಚ್ಚರಾ! ಪ್ರತಿಯೊಬ್ಬ ರಾಜನಿಗೂ ಒಂದು (ನಿಷೇಧಿತ) ವಲಯವಿದೆ. ಎಚ್ಚರಾ! ಅಲ್ಲಾಹು ನಿಷೇಧಿಸಿದ ಕಾರ್ಯಗಳು ಅವನ (ನಿಷೇಧಿತ) ವಲಯವಾಗಿದೆ. ಎಚ್ಚರಾ! ದೇಹದಲ್ಲಿ ಒಂದು ಮಾಂಸದ ತುಂಡಿದೆ. ಅದು ಸರಿಯಾದರೆ ಸಂಪೂರ್ಣ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಸಂಪೂರ್ಣ ದೇಹವು ಕೆಡುತ್ತದೆ. ಎಚ್ಚರಾ! ಅದು ಹೃದಯವಾಗಿದೆ."

20- "ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು*: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."

25- "ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ಪ್ರಾರ್ಥಿಸುತ್ತಿದ್ದರು.* ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾವು ನಿಮ್ಮಲ್ಲಿ ಮತ್ತು ನೀವು ತಂದ ಧರ್ಮದಲ್ಲಿ ವಿಶ್ವಾಸವಿಟ್ಟಿದ್ದೇವೆ. ಆದರೂ ನಿಮಗೆ ನಮ್ಮ ಬಗ್ಗೆ ಭಯವೇ?" ಅವರು ಉತ್ತರಿಸಿದರು: "ಹೌದು, ನಿಶ್ಚಯವಾಗಿಯೂ ಹೃದಯಗಳು ಅಲ್ಲಾಹನ ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಇವೆ. ಅವನು ಇಚ್ಛಿಸುವಂತೆ ಅವುಗಳನ್ನು ತಿರುಗಿಸುತ್ತಾನೆ."

33- "ನನ್ನ ಸಮುದಾಯದ ಎಲ್ಲರನ್ನೂ ಕ್ಷಮಿಸಲಾಗುವುದು, ಬಹಿರಂಗವಾಗಿ ಪಾಪ ಮಾಡುವವರ ಹೊರತು.* ಬಹಿರಂಗವಾಗಿ ಪಾಪ ಮಾಡುವ ಒಂದು ರೂಪ ಹೇಗೆಂದರೆ, ಒಬ್ಬ ವ್ಯಕ್ತಿ ರಾತ್ರಿಯಲ್ಲಿ ಒಂದು ಪಾಪವನ್ನು ಮಾಡುತ್ತಾನೆ. ನಂತರ ಅಲ್ಲಾಹು ಅದನ್ನು ಅವನಿಗಾಗಿ ಮುಚ್ಚಿಟ್ಟರೂ, ಮರುದಿನ ಬೆಳಗ್ಗೆ ಅವನು ಹೇಳುತ್ತಾನೆ: "ಓ ಇಂತಿಂತಹವರೇ! ನಾನು ನಿನ್ನೆ ರಾತ್ರಿ ಇಂತಿಂತಹ ಪಾಪ ಮಾಡಿದ್ದೇನೆ. ಅವನ ಪರಿಪಾಲಕನು (ಅಲ್ಲಾಹು) ಅವನ ಪಾಪವನ್ನು ಮುಚ್ಚಿಟ್ಟ ಸ್ಥಿತಿಯಲ್ಲಿ ಅವನು ರಾತ್ರಿಯನ್ನು ಕಳೆದಿದ್ದನು. ಆದರೆ ಬೆಳಗಾದಾಗ ಅವನು ಆ ಮುಚ್ಚಿಗೆಯನ್ನು ತೆರೆದು ಬಿಡುತ್ತಾನೆ."

43- "(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು.* ಆಗ ಒಬ್ಬರು, "ಓ ಸ್ವರ್ಗವಾಸಿಗಳೇ!" ಎಂದು ಕೂಗಿ ಕರೆಯುವರು. ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಸ್ವರ್ಗವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅವರು, "ಓ ನರಕವಾಸಿಗಳೇ" ಎಂದು ಕೂಗಿ ಕರೆಯುವರು. ಆಗ ನರಕವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ನರಕವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅದನ್ನು ಕೊಯ್ಯಲಾಗುವುದು. ನಂತರ ಅವರು ಹೇಳುವರು: "ಓ ಸ್ವರ್ಗವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ.” [ಮರ್ಯಮ್ 39] ಇಹಲೋಕದ ಈ ಜನರು ನಿರ್ಲಕ್ಷ್ಯದಲ್ಲಿದ್ದಾರೆ. "ಮತ್ತು ಅವರ ವಿಶ್ವಾಸವಿಡುವುದಿಲ್ಲ." [ಮರ್ಯಮ್ 39]

46- "ಅಲ್ಲಾಹು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ.* ಆ ನೇರ ಮಾರ್ಗದ ಎರಡು ಬದಿಗಳಲ್ಲೂ ಗೋಡೆಗಳಿವೆ. ಆ ಗೋಡೆಗಳಲ್ಲಿ ತೆರೆದುಕೊಂಡಿರುವ ಅನೇಕ ಬಾಗಿಲುಗಳಿವೆ. ಆ ಬಾಗಿಲುಗಳಲ್ಲಿ ಪರದೆಗಳನ್ನು ಹಾಕಲಾಗಿದೆ. ಆ ನೇರ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಕೂಗಿ ಹೇಳುತ್ತಿರುತ್ತಾನೆ: "ಓ ಜನರೇ! ನೀವೆಲ್ಲರೂ ನೇರ ಮಾರ್ಗವನ್ನು ಪ್ರವೇಶಿರಿ. ಅತ್ತಿತ್ತ ತಿರುಗದೆ ನೇರವಾಗಿ ನಡೆಯಿರಿ." ಆ ಮಾರ್ಗದ ಮೇಲ್ಭಾಗದಲ್ಲಿ ಒಬ್ಬ ವ್ಯಕ್ತಿಯಿದ್ದು, ಆ ಬಾಗಿಲುಗಳಲ್ಲಿ ಯಾವುದಾದರೂ ಬಾಗಿಲನ್ನು ತೆರೆಯಲು ಪ್ರಯತ್ನಿಸಿದರೆ, ಅವನು ಕೂಗಿ ಹೇಳುತ್ತಾನೆ: "ನಿನಗೆ ದುರದೃಷ್ಟ ಕಾದಿದೆ! ಆ ಬಾಗಿಲನ್ನು ತೆರೆಯಬೇಡ. ನೀನು ಅದನ್ನು ತೆರೆದರೆ ಅದರ ಒಳಗೆ ಪ್ರವೇಶಿಸಿ ಬಿಡುವೆ." ಆ ನೇರ ಮಾರ್ಗವು ಇಸ್ಲಾಂ ಧರ್ಮವಾಗಿದೆ. ಆ ಎರಡು ಗೋಡೆಗಳು ಅಲ್ಲಾಹನ ಎಲ್ಲೆಗಳಾಗಿವೆ. ತೆರೆದುಕೊಂಡಿರುವ ಬಾಗಿಲುಗಳು ಅಲ್ಲಾಹು ನಿಷೇಧಿತ ವಲಯಗಳಾಗಿವೆ. ಆ ನೇರ ಮಾರ್ಗದ ಪ್ರವೇಶದ್ವಾರದಲ್ಲಿ ಕೂಗಿ ಕರೆಯುವುದು ಅಲ್ಲಾಹನ ಗ್ರಂಥವಾಗಿದೆ. ಆ ಮಾರ್ಗದ ಮೇಲ್ಭಾಗದಿಂದ ಕೂಗಿ ಕರೆಯುವುದು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿರುವ ಅಲ್ಲಾಹನ ಉಪದೇಶಕವಾಗಿದೆ."

47- "ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ. ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ ಕಡೆಯಿಂದಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." [ಆಲು ಇಮ್ರಾನ್:7] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ಕಂಡರೆ, ಅವರೇ ಅಲ್ಲಾಹು (ಈ ವಚನದಲ್ಲಿ) ಹೇಳಿದ ಜನರು (ಎಂದು ತಿಳಿಯಿರಿ); ಮತ್ತು ಅವರ ಬಗ್ಗೆ ಎಚ್ಚರವಾಗಿರಿ.*"

49- ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ಕುಳಿತುಕೊಂಡು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನನ್ನ ಅಧೀನದಲ್ಲಿ ಇಬ್ಬರು ಗುಲಾಮರಿದ್ದಾರೆ. ಅವರು ನನ್ನಲ್ಲಿ ಸುಳ್ಳು ಹೇಳುತ್ತಾರೆ, ನನಗೆ ಮೋಸ ಮಾಡುತ್ತಾರೆ ಮತ್ತು ನನ್ನ ಮಾತನ್ನು ಕೇಳುವುದಿಲ್ಲ. ನಾನು ಅವರಿಗೆ ಗದರಿಸುತ್ತೇನೆ ಮತ್ತು ಹೊಡೆಯುತ್ತೇನೆ. ಅವರಿಗೆ ಸಂಬಂಧಿಸಿದಂತೆ ನನ್ನ ಸ್ಥಿತಿಯೇನು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "@ಅವರು ಮೋಸ ಮಾಡಿದ್ದು, ತಮ್ಮ ಮಾತನ್ನು ಕೇಳದೇ ಇದ್ದದ್ದು ಮತ್ತು ತಮ್ಮಲ್ಲಿ ಸುಳ್ಳು ಹೇಳಿದ್ದನ್ನು ನೀವು ಅವರಿಗೆ ನೀಡಿದ ಶಿಕ್ಷೆಯೊಂದಿಗೆ ಅಳೆಯಲಾಗುತ್ತದೆ*. ನೀವು ನೀಡುವ ಶಿಕ್ಷೆಯು ಅವರು ಮಾಡಿದ ಪಾಪಗಳಷ್ಟೇ ಇದ್ದರೆ ಎರಡೂ ಸಮಾನವಾಗುತ್ತದೆ. ಅದರಲ್ಲಿ ನಿಮಗೆ ಪ್ರತಿಫಲ ಅಥವಾ ಶಿಕ್ಷೆಯಿಲ್ಲ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಕಡಿಮೆ ಇದ್ದರೆ ನಿಮಗೆ ಪ್ರತಿಫಲವಿದೆ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಹೆಚ್ಚಿದ್ದರೆ ಪ್ರತೀಕಾರವಾಗಿ ನಿಮ್ಮ ಕೆಲವು ಪುಣ್ಯಕಾರ್ಯಗಳನ್ನು ಅವರಿಗೆ ನೀಡಲಾಗುತ್ತದೆ." ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಗಟ್ಟಿಯಾಗಿ ಅಳತೊಡಗಿದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಲ್ಲಾಹನ ಗ್ರಂಥದಲ್ಲಿ ಈ ವಚನವನ್ನು ಪಠಿಸಿಲ್ಲವೇ? "ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ಓ ಅಲ್ಲಾಹನ ಸಂದೇಶವಾಹಕರೇ, ಅವರನ್ನು ಸ್ವತಂತ್ರಗೊಳಿಸುವುದಲ್ಲದೆ ನನಗಾಗಲಿ ಅವರಿಗಾಗಲಿ ಯಾವುದೇ ಒಳಿತನ್ನು ನಾನು ಕಾಣುತ್ತಿಲ್ಲ. ನಾನು ನಿಮ್ಮನ್ನು ಸಾಕ್ಷಿಯಾಗಿಸಿ ಅವರೆಲ್ಲರನ್ನೂ ಸ್ವತಂತ್ರಗೊಳಿಸುತ್ತಿದ್ದೇನೆ."

50- "@ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು.*" [ಅತ್ತಕಾಸುರ್ 102:8] ಎಂಬ ವಚನವು ಅವತೀರ್ಣವಾದಾಗ, ಝುಬೈರ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಯಾವ ಅನುಗ್ರಹದ ಬಗ್ಗೆ ನಮ್ಮೊಡನೆ ಪ್ರಶ್ನಿಸಲಾಗುತ್ತದೆ? ನಮ್ಮಲ್ಲಿರುವುದು ಎರಡು ಕಪ್ಪು ವಸ್ತುಗಳು—،ಖರ್ಜೂರ ಮತ್ತು ನೀರು ಮಾತ್ರವಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅದು ಖಂಡಿತವಾಗಿಯೂ ಸಂಭವಿಸುತ್ತದೆ."