Jurisprudence and Juristic Principles - الصفحة 2

Jurisprudence and Juristic Principles - الصفحة 2

4- "ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ.* ಎರಡನೇ ತಾಸಿನಲ್ಲಿ ಹೊರಡುವವನು ಹಸುವನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಮೂರನೇ ತಾಸಿನಲ್ಲಿ ಹೊರಡುವವನು ಕೊಂಬುಗಳಿರುವ ಟಗರನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಾಲ್ಕನೇ ತಾಸಿನಲ್ಲಿ ಹೊರಡುವವನು ಕೋಳಿಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಐದನೇ ತಾಸಿನಲ್ಲಿ ಹೊರಡುವವನು ಮೊಟ್ಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಂತರ, ಇಮಾಮರು ಹೊರ ಬಂದರೆ ದೇವದೂತರುಗಳು ಪ್ರವಚನವನ್ನು ಕೇಳಲು ಹಾಜರಾಗುತ್ತಾರೆ."

9- “ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು.* ಆಡಳಿತಗಾರನು ಜನರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಪುರುಷನು ತನ್ನ ಮನೆಯವರಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅವರಿಗೆ ಅವನೇ ಜವಾಬ್ದಾರನಾಗಿದ್ದಾನೆ. ಮಹಿಳೆ ತನ್ನ ಗಂಡನ ಮನೆಗೆ ಮತ್ತು ಅವನ ಮಕ್ಕಳಿಗೆ ಕುರಿಗಾಹಿಯಾಗಿದ್ದಾಳೆ ಮತ್ತು ಅವರಿಗೆ ಅವಳೇ ಜವಾಬ್ದಾರಳಾಗಿದ್ದಾಳೆ. ಗುಲಾಮನು ತನ್ನ ಯಜಮಾನನ ಆಸ್ತಿಗೆ ಕುರಿಗಾಹಿಯಾಗಿದ್ದಾನೆ ಮತ್ತು ಅದಕ್ಕೆ ಅವನೇ ಜವಾಬ್ದಾರನಾಗಿದ್ದಾನೆ. ತಿಳಿಯಿರಿ! ನೀವೆಲ್ಲರೂ ಕುರಿಗಾಹಿಗಳು ಮತ್ತು ನಿಮ್ಮ ಕುರಿ ಮಂದೆಗೆ ನೀವೇ ಜವಾಬ್ದಾರರು."

18- "ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ."

19- "ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವವನು ಅವುಗಳ ಹಕ್ಕನ್ನು (ಝಕಾತನ್ನು) ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಅಗ್ನಿಯ ಹಾಳೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಲಾಗುವುದು.* ನಂತರ ಅವನ ಪಾರ್ಶ್ವ, ಹಣೆ ಮತ್ತು ಬೆನ್ನುಗಳಿಗೆ ಅದರಿಂದ ಬರೆ ಹಾಕಲಾಗುವುದು. ಅವು ತಣ್ಣಗಾದಾಗಲೆಲ್ಲಾ ಅದನ್ನು ಪುನಃ ಕಾಯಿಸಲಾಗುವುದು. ಐವತ್ತು ಸಾವಿರ ವರ್ಷಗಳಷ್ಟು ದೀರ್ಘವಾದ ದಿನದಂದು ಅಲ್ಲಾಹು ಅವನ ದಾಸರ ಮಧ್ಯೆ ತೀರ್ಪು ನೀಡಿ ಮುಗಿಸುವ ತನಕ ಇದು ಮುಂದುವರಿಯುವುದು. ನಂತರ ಅವನು ಒಂದೋ ಸ್ವರ್ಗಕ್ಕೆ ಅಥವಾ ನರಕಕ್ಕೆ ಅವನ ದಾರಿಯನ್ನು ಕಂಡುಕೊಳ್ಳುವನು."

21- ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಕಡಲಿನಲ್ಲಿ ಪ್ರಯಾಣ ಮಾಡುವವರು. ನಾವು ನಮ್ಮೊಂದಿಗೆ ಸ್ವಲ್ಪ ನೀರನ್ನು ಒಯ್ಯುತ್ತೇವೆ. ಆ ನೀರಿನಿಂದ ನಾವು ವುದೂ ನಿರ್ವಹಿಸಿದರೆ ನಮಗೆ ಕುಡಿಯಲು ನೀರು ಇರುವುದಿಲ್ಲ. ನಾವು ಸಮುದ್ರದ ನೀರಿನಿಂದ ವುದೂ ಮಾಡಬಹುದೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: @"ಅದರ ನೀರು ಶುದ್ಧವಾಗಿದೆ ಮತ್ತು ಅದರ ಶವವು ಧರ್ಮಸಮ್ಮತವಾಗಿದೆ."

29- "ಒಬ್ಬ ಮಹಿಳೆ ತನ್ನ ಜೊತೆಗೆ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದೆ ಎರಡು ದಿನಗಳಷ್ಟು ದೂರದ ಪ್ರಯಾಣ ಮಾಡಬಾರದು.* ಎರಡು ದಿನಗಳಲ್ಲಿ—ಈದುಲ್-ಫಿತ್ರ್ ಮತ್ತು ಈದುಲ್-ಅದ್‌ಹಾ—ಉಪವಾಸ ಆಚರಿಸಬಾರದು. ಫಜ್ರ್ ನಮಾಝಿನ ನಂತರ ಸೂರ್ಯೋದಯದವರೆಗೆ ಮತ್ತು ಅಸರ್ ನಮಾಝಿನ ನಂತರ ಸೂರ್ಯಾಸ್ತದವರೆಗೆ ಬೇರೆ ನಮಾಝ್ ಮಾಡಬಾರದು. ಮೂರು ಮಸೀದಿಗಳನ್ನು ಹೊರತುಪಡಿಸಿ ಬೇರೆಲ್ಲಿಗೂ ಯಾತ್ರೆ ಹೋಗಬಾರದು — ಮಸ್ಜಿದುಲ್-ಹರಾಂ, ಮಸ್ಜಿದುಲ್-ಅಕ್ಸಾ ಮತ್ತು ನನ್ನ ಈ ಮಸೀದಿ (‌ಮಸ್ಜಿದು-ನ್ನಬವಿ)."

37- ಒಮ್ಮೆ ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಬ್ಬ ವ್ಯಕ್ತಿ ಒಂಟೆಯಲ್ಲಿ ಸವಾರಿ ಮಾಡುತ್ತಾ ಅಲ್ಲಿಗೆ ಬಂದರು. ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿಹಾಕಿದರು. ನಂತರ ನಮ್ಮೊಡನೆ ಕೇಳಿದರು: "ನಿಮ್ಮಲ್ಲಿ ಮುಹಮ್ಮದ್ ಯಾರು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಒರಗಿ ಕುಳಿತಿದ್ದರು. ನಾವು ಹೇಳಿದೆವು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಪ್ರವಾದಿಯವರು, "ನಾನು ನಿನಗೆ ಉತ್ತರ ನೀಡಲು ಇಲ್ಲಿದ್ದೇನೆ" ಎಂದು ಉತ್ತರಿಸಿದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಆಗ ಪ್ರವಾದಿಯವರು ಹೇಳಿದರು: "ನಿಮಗೆ ಕೇಳಲಿರುವುದನ್ನು ಕೇಳಿ." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಸಂಪೂರ್ಣ ಮನುಕುಲದ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಆ ವ್ಯಕ್ತಿ ಹೇಳಿದರು: "ತಾವು ತಂದ ಸಂದೇಶದಲ್ಲಿ ನಾನು ವಿಶ್ವಾಸವಿಟ್ಟಿದ್ದೇನೆ. ನಾನು ನನ್ನ ಗೋತ್ರದ ದೂತನಾಗಿ ಇಲ್ಲಿಗೆ ಬಂದಿದ್ದೇನೆ. @ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ."

45- "ಉಸ್ಮಾನ್ ಬಿನ್ ಅಫ್ಫಾನ್ ಮಸೀದಿಯನ್ನು ಪುನರ್ ನಿರ್ಮಿಸಲು ಬಯಸಿದರು. ಆದರೆ ಜನರಿಗೆ ಅದು ಇಷ್ಟವಿರಲಿಲ್ಲ. ಮಸೀದಿ ಹೇಗಿತ್ತೋ ಹಾಗೆಯೇ ಇರುವುದು ಅವರಿಗೆ ಇಷ್ಟವಾಗಿತ್ತು. ಆಗ ಉಸ್ಮಾನ್ ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "@ಯಾರು ಅಲ್ಲಾಹನಿಗೋಸ್ಕರ ಒಂದು ಮಸೀದಿಯನ್ನು ನಿರ್ಮಿಸುತ್ತಾರೋ ಅವರಿಗೆ ಅಲ್ಲಾಹು ಸ್ವರ್ಗದಲ್ಲಿ ಅದಕ್ಕೆ ಸಮಾನವಾದುದನ್ನು ನಿರ್ಮಿಸುತ್ತಾನೆ."

50- ಒಮ್ಮೆ ಕೆಲವು ಜನರು ಸಹಲ್ ಬಿನ್ ಸಅದ್ ಸಾಇದೀಯವರ ಬಳಿಗೆ ಬಂದರು. ಮಿಂಬರ್ (ಪ್ರವಚನ ಪೀಠ) ವನ್ನು ಯಾವುದರಿಂದ ನಿರ್ಮಿಸಲಾಗಿದೆಯೆಂಬ ಬಗ್ಗೆ ಅವರಿಗೆ ತರ್ಕವಿತ್ತು. ಅವರು ಅದರ ಬಗ್ಗೆ ಕೇಳಿದಾಗ, ಸಹಲ್ ಉತ್ತರಿಸಿದರು: "ಅಲ್ಲಾಹನಾಣೆ! ಅದನ್ನು ಯಾವುದರಿಂದ ತಯಾರಿಸಲಾಗಿದೆಯೆಂದು ನನಗೆ ತಿಳಿದಿದೆ. ಅದನ್ನು ಸ್ಥಾಪಿಸಲಾದ ಮೊದಲನೇ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರಲ್ಲಿ ಕುಳಿತುಕೊಂಡ ಮೊದಲ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ಮಹಿಳೆಗೆ—ಸಹಲ್ ಆ ಮಹಿಳೆಯ ಹೆಸರನ್ನು ಹೇಳಿದ್ದರು—ಹೇಳಿ ಕಳುಹಿಸಿದರು: "ನನಗೆ ಕೆಲವು ಮೆಟ್ಟಲುಗಳಿರುವ ಪೀಠವನ್ನು ತಯಾರಿಸಿಕೊಡಲು ನಿನ್ನ ಬಡಗಿ ಗುಲಾಮನಿಗೆ ಹೇಳು. ನಾನು ಅದರಲ್ಲಿ ಕುಳಿತು ಜನರೊಂದಿಗೆ ಮಾತನಾಡುವುದಕ್ಕಾಗಿ." ಅವಳು ತನ್ನ ಗುಲಾಮನಿಗೆ ಆದೇಶಿಸಿದಾಗ ಆತ ಅದನ್ನು ಗಾಬದ (ಮದೀನದ ಬಳಿಯ ಒಂದು ಸ್ಥಳ) ಮರದಿಂದ ತಯಾರಿಸಿ ಆಕೆಯ ಕೈಗೆ ನೀಡಿದನು. ಅವಳು ಅದನ್ನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಳುಹಿಸಿಕೊಟ್ಟಳು. ಅವರು ಅದನ್ನು ಅದರ ಸ್ಥಳದಲ್ಲಿ ಸ್ಥಾಪಿಸುವಂತೆ ಹೇಳಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಮೇಲೇರಿ ನಮಾಝ್ ನಿರ್ವಹಿಸುವುದನ್ನು ನಾನು ನೋಡಿದೆ. ಅವರು ಅದರ ಮೇಲಿಂದಲೇ ತಕ್ಬೀರ್ ಹೇಳಿದರು ಮತ್ತು ರುಕೂ ಮಾಡಿದರು. ನಂತರ ಹಿಂಭಾಗಕ್ಕೆ ಚಲಿಸುತ್ತಾ ಕೆಳಗಿಳಿದು ಪೀಠದ ಬುಡದಲ್ಲಿ ಸುಜೂದ್ ಮಾಡಿದರು. ನಂತರ ಪುನಃ ಅದರ ಮೇಲೇರಿದರು. ನಮಾಝ್ ಮುಗಿಸಿದ ನಂತರ ಅವರು ಜನರ ಕಡೆಗೆ ತಿರುಗಿ ಹೇಳಿದರು: "@ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ."

61- "ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು ನಿಷೇಧಿಸಿದ್ದಾರೆ."* ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸತ್ತ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಲಾಗಿದೆಯೇ? ಏಕೆಂದರೆ, ಇದನ್ನು ಹಡಗುಗಳಿಗೆ ಲೇಪಿಸಲು ಮತ್ತು ತೊಗಲನ್ನು ಹದಗೊಳಿಸಲು ಬಳಸಲಾಗುತ್ತದೆ. ಜನರು ಇದನ್ನು ದೀಪ ಉರಿಸಲು ಕೂಡ ಬಳಸುತ್ತಾರೆ." ಅವರು ಹೇಳಿದರು: "ಇಲ್ಲ. ಅದು ನಿಷೇಧಿಸಲಾಗಿದೆ." ನಂತರ ಇದಕ್ಕೆ ಸಂಬಂಧಿಸಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಹೂದಿಗಳನ್ನು ನಾಶಗೊಳಿಸಲಿ. ಅಲ್ಲಾಹು ಅವರಿಗೆ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಿದಾಗ, ಅವರು ಅದನ್ನು ಕರಗಿಸಿ, ಅದರ ಎಣ್ಣೆಯನ್ನು ಮಾರಾಟ ಮಾಡಿದರು ಮತ್ತು ಅದರ ಹಣವನ್ನು ತಿಂದು ತೇಗಿದರು."

65- "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಇದ್ದಾಗ, ನಾವು ಚಿಕ್ಕವರು, ದೊಡ್ಡವರು, ಸ್ವತಂತ್ರರು ಮತ್ತು ಗುಲಾಮರು ಹೀಗೆ ಎಲ್ಲರ ಪರವಾಗಿಯೂ, ಒಂದು ಸಾಅ್ ಆಹಾರ, ಅಥವಾ ಒಂದು ಸಾಅ್ ಗಿಣ್ಣು, ಅಥವಾ ಒಂದು ಸಾಅ್ ಬಾರ್ಲಿ, ಅಥವಾ ಒಂದು ಸಾಅ್ ಖರ್ಜೂರ, ಅಥವಾ ಒಂದು ಸಾಅ್ ಒಣದ್ರಾಕ್ಷಿ ಫಿತ್ರ್ ಝಕಾತ್ ನೀಡುತ್ತಿದ್ದೆವು.* ಮುಆವಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮ್ಮ ಬಳಿಗೆ ಹಜ್ಜ್ ಅಥವಾ ಉಮ್ರ ನಿರ್ವಹಿಸಲು ಬರುವ ತನಕ ನಾವು ಹೀಗೆಯೇ ಕೊಡುತ್ತಿದ್ದೆವು. ಅವರು ಮಿಂಬರ್ (ಪ್ರವಚನ ಪೀಠ) ಏರಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ಜನರಿಗೆ ಹೇಳಿದ ಒಂದು ಮಾತು ಹೀಗಿತ್ತು: "ನಿಶ್ಚಯವಾಗಿಯೂ ಸಿರಿಯಾದ ಎರಡು ಮುದ್ದ್ ಗೋಧಿಯು ಒಂದು ಸಾಅ್ ಖರ್ಜೂರಕ್ಕೆ ಸಮವಾಗಿದೆ ಎಂದು ನಾನು ಕಾಣುತ್ತೇನೆ." ಜನರು ಅದನ್ನು ಅನುಸರಿಸಿದರು. (ಅಬೂ ಸಈದ್ ಹೇಳುತ್ತಾರೆ): ಆದರೆ ನಾನು ಜೀವಂತವಿರುವವರೆಗೂ ಪ್ರವಾದಿಯ ಕಾಲದಂತೆಯೇ ಫಿತ್ರ್ ಝಕಾತ್ ನೀಡುವುದನ್ನು ಮುಂದುವರಿಸಿದೆನು."

78- "ಅಬೂ ಮೂಸಾ ತೀವ್ರ ನೋವಿನಿಂದ ಬಳಲುತ್ತಿದ್ದರು. ಅವರ ತಲೆಯು ಅವರ ಕುಟುಂಬದ ಮಹಿಳೆಯೊಬ್ಬರ ಮಡಿಲಿನಲ್ಲಿದ್ದ ಸ್ಥಿತಿಯಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಆಕೆಗೆ ಯಾವುದೇ ರೀತಿಯಲ್ಲಿ ಉತ್ತರ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಜ್ಞೆ ಮರಳಿ ಬಂದ ನಂತರ ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರಿಂದ ಮುಕ್ತರಾಗಿದ್ದರೋ ಅವರಿಂದ ನಾನು ಕೂಡ ಮುಕ್ತನಾಗಿದ್ದೇನೆ. @ಖಂಡಿತವಾಗಿಯೂ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಲಿಕ (ಗೋಳಾಡುವ ಮಹಿಳೆ), ಹಾಲಿಕ (ತಲೆ ಬೋಳಿಸಿಕೊಳ್ಳುವ ಮಹಿಳೆ) ಮತ್ತು ಶಾಕ್ಕ (ಬಟ್ಟೆ ಹರಿದುಕೊಳ್ಳುವ ಮಹಿಳೆ) ರಿಂದ ಮುಕ್ತರಾಗಿದ್ದರು."