Virtues and Manners - الصفحة 2

Virtues and Manners - الصفحة 2

1- "ಪುರುಷನು ಖರ್ಚು ಮಾಡುವ ಅತಿಶ್ರೇಷ್ಠ ದೀನಾರ್ ಎಂದರೆ ಅವನು ತನ್ನ ಕುಟುಂಬಕ್ಕಾಗಿ ಖರ್ಚು ಮಾಡುವ ದೀನಾರ್, ಪುರುಷನು ಅಲ್ಲಾಹನ ಮಾರ್ಗದಲ್ಲಿ ತನ್ನ ಸವಾರಿಗಾಗಿ ಖರ್ಚು ಮಾಡುವ ದೀನಾರ್, ಮತ್ತು ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಸಹಚರರಿಗಾಗಿ ಖರ್ಚು ಮಾಡುವ ದೀನಾರ್."* ಅಬೂ ಕಿಲಾಬ ಹೇಳಿದರು: "ಅವರು ಕುಟುಂಬದಿಂದ ಆರಂಭಿಸಿದರು." ನಂತರ ಅಬೂ ಕಿಲಾಬ ಹೇಳಿದರು: "ತನ್ನ ಕುಟುಂಬದ ಕಿರಿಯ ಸದಸ್ಯರಿಗಾಗಿ ಖರ್ಚು ಮಾಡುವ ಪುರುಷನಿಗಿಂತ ಹೆಚ್ಚು ಪ್ರತಿಫಲ ಪಡೆಯುವವರು ಯಾರಿದ್ದಾರೆ? ಅವನ ಮೂಲಕ ಅಲ್ಲಾಹು ಅವರನ್ನು ಪರಿಶುದ್ಧರನ್ನಾಗಿ ಮಾಡುತ್ತಾನೆ ಅಥವಾ ಅವರಿಗೆ ಪ್ರಯೋಜನವನ್ನು ನೀಡುತ್ತಾನೆ ಮತ್ತು ಅವರನ್ನು ಶ್ರೀಮಂತಗೊಳಿಸುತ್ತಾನೆ."

13- "ನಾಳೆ ನಾನು ಈ ಪತಾಕೆಯನ್ನು ಒಬ್ಬ ವ್ಯಕ್ತಿಗೆ ಕೊಡುವೆನು. ಅವನ ಕೈಯಿಂದ ಅಲ್ಲಾಹು ವಿಜಯವನ್ನು ದಯಪಾಲಿಸುವನು. ಅವನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುತ್ತಾನೆ ಮತ್ತು ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವನನ್ನು ಪ್ರೀತಿಸುತ್ತಾರೆ." ಪತಾಕೆ ಯಾರ ಕೈಗೆ ಕೊಡಲಾಗಬಹುದು ಎಂದು ಮಾತನಾಡುತ್ತಾ ಜನರು ಆ ರಾತ್ರಿಯನ್ನು ಕಳೆದರು. ಬೆಳಗಾದಾಗ, ಜನರೆಲ್ಲರೂ ಅದನ್ನು ತಮ್ಮ ಕೈಗೆ ಕೊಡಲಾಗಬಹುದೆಂಬ ನಿರೀಕ್ಷೆಯಿಂದ ಬೆಳಗ್ಗೆಯೇ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತೆರಳಿದರು. ಅವರು (ಪ್ರವಾದಿ) ಕೇಳಿದರು: "ಅಲೀ ಬಿನ್ ಅಬೂ ತಾಲಿಬ್ ಎಲ್ಲಿ?" ಅವರು ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಕಣ್ಣ ನೋವಿನಿಂದ ಬಳಲುತ್ತಿದ್ದಾರೆ." ಅವರು ಹೇಳಿದರು: "ಅವನ ಬಳಿಗೆ ಜನರನ್ನು ಕಳುಹಿಸಿ." ಅವರು ಬಂದಾಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಎರಡು ಕಣ್ಣುಗಳಿಗೆ ಉಗಿದು ಪ್ರಾರ್ಥಿಸಿದರು. ಆಗ ಅವರ ಕಣ್ಣಿನಲ್ಲಿ ಯಾವುದೇ ನೋವಿರಲಿಲ್ಲವೋ ಎಂಬಂತೆ ಅದು ಗುಣವಾಯಿತು. ಅವರು ಪತಾಕೆಯನ್ನು ಅವರಿಗೆ ಕೊಟ್ಟರು. ಅಲಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ನಮ್ಮಂತೆ ಆಗುವ ತನಕ ನಾನು ಅವರೊಂದಿಗೆ ಯುದ್ಧ ಮಾಡಬೇಕೇ?" ಅವರು ಉತ್ತರಿಸಿದರು: "ಅವರ ಅಂಗಳವನ್ನು ತಲುಪುವ ತನಕ ಸಾವಧಾನದಿಂದ ಮುಂದುವರಿಯಿರಿ. ನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಕರೆಯಿರಿ. ಅಲ್ಲಾಹನ ಹಕ್ಕಿಗೆ ಸಂಬಂಧಿಸಿದಂತೆ ಅವರಿಗೆ ಏನು ಕಡ್ಡಾಯವಾಗಿದೆಯೆಂಬುದನ್ನು ತಿಳಿಸಿಕೊಡಿ.@ಏಕೆಂದರೆ, ಅಲ್ಲಾಹನಾಣೆ! ಅಲ್ಲಾಹು ನಿನ್ನ ಮೂಲಕ ಒಬ್ಬ ವ್ಯಕ್ತಿಗೆ ಸನ್ಮಾರ್ಗವನ್ನು ಕರುಣಿಸುವುದು ನಿನಗೆ ಕೆಂಪು ಒಂಟೆಗಳಿರುವುದಕ್ಕಿಂತಲೂ ಶ್ರೇಷ್ಠವಾಗಿದೆ."

17- "ನಿಮ್ಮ ಕರ್ಮಗಳಲ್ಲಿ ಶ್ರೇಷ್ಠವಾದ, ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಪರಿಶುದ್ಧವಾದ, ನಿಮ್ಮ ಪದವಿಗಳಲ್ಲಿ ಅತಿ ಎತ್ತರವಾದ, ಚಿನ್ನ ಮತ್ತು ಬೆಳ್ಳಿಯನ್ನು ವ್ಯಯಿಸುವುದಕ್ಕಿಂತಲೂ ಉತ್ತಮವಾದ, ನೀವು ನಿಮ್ಮ ಶತ್ರುವಿನೊಂದಿಗೆ ಹೋರಾಡಿ ನೀವು ಅವರನ್ನು ಮತ್ತು ಅವರು ನಿಮ್ಮನ್ನು ಕೊಲ್ಲುವುದಕ್ಕಿಂತಲೂ ಉತ್ತಮವಾದ ಒಂದು ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ?"* ಅವರು ಹೇಳಿದರು: "ತಿಳಿಸಿಕೊಡಿ." ಅವರು (ಪ್ರವಾದಿ) ಹೇಳಿದರು: "ಅಲ್ಲಾಹನ ಸ್ಮರಣೆ."

23- ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದ ದಾರಿಯಲ್ಲಿ ಚಲಿಸುತ್ತಿದ್ದರು. ಅವರು ಜುಮ್ದಾನ್ ಎಂಬ ಹೆಸರಿನ ಪರ್ವತದ ಬಳಿಯಿಂದ ಸಾಗಿದಾಗ ಹೇಳಿದರು: "ಮುಂದುವರಿಯಿರಿ. ಇದು ಜುಮ್ದಾನ್. @ಮುಫರ್‍ರಿದ್‌ಗಳು (ಅನನ್ಯರು) ಮುಂಚೂಣಿಯಲ್ಲಿದ್ದಾರೆ.*" ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಮುಫರ್‍ರಿದ್‌ಗಳು ಎಂದರೇನು?" ಅವರು ಉತ್ತರಿಸಿದರು: "ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವ ಪುರುಷರು ಮತ್ತು ಸ್ತ್ರೀಯರು."

24- "ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ ಗುದ್ದುತ್ತಾ, "ರಾತ್ರಿ ಇನ್ನೂ ದೀರ್ಘವಾಗಿದೆ; ಮಲಗು" ಎನ್ನುತ್ತಿರುವನು.* ಅವನೇನಾದರೂ ಎದ್ದು ಅಲ್ಲಾಹನನ್ನು ಸ್ಮರಿಸಿದರೆ, ಒಂದು ಗಂಟು ಬಿಚ್ಚಿಹೋಗುತ್ತದೆ. ಅವನು ವುದೂ ನಿರ್ವಹಿಸಿದರೆ ಇನ್ನೊಂದು ಗಂಟು ಬಿಚ್ಚಿಹೋಗುತ್ತದೆ. ಅವನು ನಮಾಝ್ ಮಾಡಿದರೆ ಮೂರನೆಯ ಗಂಟು ಬಿಚ್ಚಿಹೋಗುತ್ತದೆ. ಆಗ ಅವನು ಉಲ್ಲಾಸದಿಂದ ಶುದ್ಧ ಮನಸ್ಸಿನೊಂದಿಗೆ ಬೆಳಗನ್ನು ಪ್ರವೇಶಿಸುತ್ತಾನೆ. ಇಲ್ಲದಿದ್ದರೆ ಅವನು ಕೆಟ್ಟ ಮನಸ್ಸಿನೊಂದಿಗೆ ಆಲಸ್ಯದಿಂದ ಬೆಳಗನ್ನು ಪ್ರವೇಶಿಸುತ್ತಾನೆ."

25- "ನನ್ನ ಸಮುದಾಯದ ಎಲ್ಲರನ್ನೂ ಕ್ಷಮಿಸಲಾಗುವುದು, ಬಹಿರಂಗವಾಗಿ ಪಾಪ ಮಾಡುವವರ ಹೊರತು.* ಬಹಿರಂಗವಾಗಿ ಪಾಪ ಮಾಡುವ ಒಂದು ರೂಪ ಹೇಗೆಂದರೆ, ಒಬ್ಬ ವ್ಯಕ್ತಿ ರಾತ್ರಿಯಲ್ಲಿ ಒಂದು ಪಾಪವನ್ನು ಮಾಡುತ್ತಾನೆ. ನಂತರ ಅಲ್ಲಾಹು ಅದನ್ನು ಅವನಿಗಾಗಿ ಮುಚ್ಚಿಟ್ಟರೂ, ಮರುದಿನ ಬೆಳಗ್ಗೆ ಅವನು ಹೇಳುತ್ತಾನೆ: "ಓ ಇಂತಿಂತಹವರೇ! ನಾನು ನಿನ್ನೆ ರಾತ್ರಿ ಇಂತಿಂತಹ ಪಾಪ ಮಾಡಿದ್ದೇನೆ. ಅವನ ಪರಿಪಾಲಕನು (ಅಲ್ಲಾಹು) ಅವನ ಪಾಪವನ್ನು ಮುಚ್ಚಿಟ್ಟ ಸ್ಥಿತಿಯಲ್ಲಿ ಅವನು ರಾತ್ರಿಯನ್ನು ಕಳೆದಿದ್ದನು. ಆದರೆ ಬೆಳಗಾದಾಗ ಅವನು ಆ ಮುಚ್ಚಿಗೆಯನ್ನು ತೆರೆದು ಬಿಡುತ್ತಾನೆ."

43- "ಅಲ್ಲಾಹುಮ್ಮ ಅಸ್ಲಿಹ್ ಲೀ ದೀನೀ ಅಲ್ಲದೀ ಹುವ ಇಸ್ಮತು ಅಮ್ರೀ,* ವಅಸ್ಲಿಹ್ ಲೀ ದುನ್ಯಾಯಾಯ ಅಲ್ಲತೀ ಫೀಹಾ ಮಆಶೀ, ವಅಸ್ಲಿಹ್ ಲೀ ಆಖಿರತೀ ಅಲ್ಲತೀ ಫೀಹಾ ಮಆದೀ, ವಜ್‌ಅಲಿಲ್ ಹಯಾತ ಝಿಯಾದತನ್ ಲೀ ಫೀ ಕುಲ್ಲಿ ಖೈರಿನ್, ವಜ್‌ಅಲಿಲ್ ಮೌತ ರಾಹತನ್ ಲೀ ಮಿನ್ ಕುಲ್ಲಿ ಶರ‍್ರ್" (ಓ ಅಲ್ಲಾಹ್, ನನ್ನ ಕೆಲಸ-ಕಾರ್ಯಗಳ ಸಂರಕ್ಷಣೆಯಾಗಿರುವ ನನ್ನ ಧರ್ಮವನ್ನು ನನಗೆ ಉತ್ತಮಗೊಳಿಸು, ನಾನು ಜೀವಿಸಬೇಕಾದ ನನ್ನ ಇಹಲೋಕವನ್ನು ನನಗೆ ಉತ್ತಮಗೊಳಿಸು, ನನ್ನ ಮರಳಿ ಹೋಗಬೇಕಾದ ನನ್ನ ಪರಲೋಕವನ್ನು ನನಗೆ ಉತ್ತಮಗೊಳಿಸು. ಜೀವನವನ್ನು ಎಲ್ಲಾ ರೀತಿಯ ಒಳಿತುಗಳಲ್ಲಿ ನನಗೆ ಹೆಚ್ಚಿಸಿಕೊಡು ಮತ್ತು ಮರಣವನ್ನು ಎಲ್ಲ ರೀತಿಯ ಕೆಡುಕುಗಳಿಂದ ನೆಮ್ಮದಿಯಾಗಿ ಮಾಡು).

45- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಳಗಾಗುವಾಗ ಮತ್ತು ಸಂಜೆಯಾಗುವಾಗ ಈ ಪ್ರಾರ್ಥನೆಗಳನ್ನು ಪಠಿಸದೆ ಬಿಟ್ಟುಬಿಡುತ್ತಿರಲಿಲ್ಲ: @"ಓ ಅಲ್ಲಾಹ್! ಇಹಲೋಕದಲ್ಲೂ, ಪರಲೋಕದಲ್ಲೂ ನಾನು ನಿನ್ನಲ್ಲಿ ಸೌಖ್ಯವನ್ನು ಬೇಡುತ್ತೇನೆ.* ಓ ಅಲ್ಲಾಹ್! ನನ್ನ ಧರ್ಮದಲ್ಲಿ, ಇಹಲೋಕದಲ್ಲಿ, ಕುಟುಂಬದಲ್ಲಿ ಮತ್ತು ಸಂಪತ್ತಿನಲ್ಲಿ ಕ್ಷಮೆ ಮತ್ತು ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ಕುಂದು-ಕೊರತೆಗಳನ್ನು ಮುಚ್ಚಿಡು ಮತ್ತು ನನ್ನ ಭಯವನ್ನು ನಿವಾರಿಸು. ಓ ಅಲ್ಲಾಹ್! ನನ್ನ ಮುಂಭಾಗದಿಂದ, ನನ್ನ ಹಿಂಭಾಗದಿಂದ, ನನ್ನ ಬಲಭಾಗದಿಂದ, ನನ್ನ ಎಡಭಾಗದಿಂದ, ನನ್ನ ಮೇಲ್ಭಾಗದಿಂದ ನನ್ನನ್ನು ರಕ್ಷಿಸು. ನನ್ನ ಕೆಳಭಾಗದಿಂದ ನನ್ನನ್ನು ಹತ್ಯೆಗೈಯಲಾಗುವುದರಿಂದ ನಾನು ನಿನ್ನ ಮಹಾತ್ಮೆಯ ಮೂಲಕ ನಿನ್ನಲ್ಲಿ ರಕ್ಷೆ ಬೇಡುತ್ತೇನೆ."

52- "ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ* ಯಾವುದೆಂದರೆ ನೀವು ಹೀಗೆ ಪಠಿಸುವುದು: ಓ ಅಲ್ಲಾಹ್! ನೀನೇ ನನ್ನ ಪರಿಪಾಲಕ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ ಮತ್ತು ನಾನು ನಿನ್ನ ದಾಸನಾಗಿರುವೆ. ನಾನು ನನಗೆ ಸಾಧ್ಯವಾದಷ್ಟು ನಿನ್ನ ಕರಾರು ಮತ್ತು ವಾಗ್ದಾನಕ್ಕೆ ನಿಷ್ಠನಾಗಿರುತ್ತೇನೆ. ನಾನು ಮಾಡಿದ ಪಾಪಗಳ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನನ್ನ ಮೇಲಿರುವ ನಿನ್ನ ಅನುಗ್ರಹಗಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಮಾಡಿದ ಪಾಪಗಳನ್ನೂ ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ನನ್ನನ್ನು ಕ್ಷಮಿಸು. ಏಕೆಂದರೆ, ನಿಶ್ಚಯವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ." ಅವರು (ಪ್ರವಾದಿ) ಮುಂದುವರಿದು ಹೇಳಿದರು: "ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ಹಗಲಿನಲ್ಲಿ ಪಠಿಸಿ, ನಂತರ ಅದೇ ದಿನ ಸಂಜೆಯಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ. ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ರಾತ್ರಿಯಲ್ಲಿ ಪಠಿಸಿ, ನಂತರ ಬೆಳಗಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ."

63- "ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ?"* ಅವರು (ಸ್ವಹಾಬಗಳು) ಹೇಳಿದರು: "ನಮ್ಮಲ್ಲಿ ದಿವಾಳಿ ಯಾರೆಂದರೆ ಹಣ ಅಥವಾ ಸಾಮಾನುಗಳು ಇಲ್ಲದವನು." ಅವರು ಹೇಳಿದರು: "ಖಂಡಿತವಾಗಿಯೂ, ನನ್ನ ಸಮುದಾಯದಲ್ಲಿ ದಿವಾಳಿ ಯಾರೆಂದರೆ, ಪುನರುತ್ಥಾನದ ದಿನದಂದು ನಮಾಝ್, ಉಪವಾಸ ಮತ್ತು ಝಕಾತ್‌ಗಳೊಂದಿಗೆ ಬರುವವನು. ಆದರೆ, ಅದೇ ಸಮಯ ಅವನು ಇತರರನ್ನು ನಿಂದಿಸಿ, ಇತರರ ಮೇಲೆ ಸುಳ್ಳಾರೋಪ ಹೊರಿಸಿ, ಇತರರ ರಕ್ತ ಚೆಲ್ಲಿ ಮತ್ತು ಇತರರಿಗೆ ಥಳಿಸಿದಂತಹ ಪಾಪಗಳೊಂದಿಗೂ ಬರುತ್ತಾನೆ. ಆಗ ಅವನ ಸತ್ಕರ್ಮಗಳಿಂದ ಕೆಲವನ್ನು ನೀಡಿ ಅವರಿಗೆ ನ್ಯಾಯ ಒದಗಿಸಲಾಗುವುದು. ಅವರೆಲ್ಲರಿಗೂ ನ್ಯಾಯ ಒದಗಿಸುವ ಮೊದಲೇ ಇವನ ಸತ್ಕರ್ಮಗಳು ಮುಗಿದು ಬಿಟ್ಟರೆ, ಅವರ ಕೆಲವು ಪಾಪಗಳನ್ನು ತೆಗೆದು ಇವನ ಮೇಲೆ ಹೊರಿಸಲಾಗುವುದು. ನಂತರ ಅವನನ್ನು ನರಕಕ್ಕೆ ಎಸೆಯಲಾಗುವುದು."

74- "(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು.* ಆಗ ಒಬ್ಬರು, "ಓ ಸ್ವರ್ಗವಾಸಿಗಳೇ!" ಎಂದು ಕೂಗಿ ಕರೆಯುವರು. ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಸ್ವರ್ಗವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅವರು, "ಓ ನರಕವಾಸಿಗಳೇ" ಎಂದು ಕೂಗಿ ಕರೆಯುವರು. ಆಗ ನರಕವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ನರಕವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅದನ್ನು ಕೊಯ್ಯಲಾಗುವುದು. ನಂತರ ಅವರು ಹೇಳುವರು: "ಓ ಸ್ವರ್ಗವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ.” [ಮರ್ಯಮ್ 39] ಇಹಲೋಕದ ಈ ಜನರು ನಿರ್ಲಕ್ಷ್ಯದಲ್ಲಿದ್ದಾರೆ. "ಮತ್ತು ಅವರ ವಿಶ್ವಾಸವಿಡುವುದಿಲ್ಲ." [ಮರ್ಯಮ್ 39]

79- "ಅಲ್ಲಾಹು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ.* ಆ ನೇರ ಮಾರ್ಗದ ಎರಡು ಬದಿಗಳಲ್ಲೂ ಗೋಡೆಗಳಿವೆ. ಆ ಗೋಡೆಗಳಲ್ಲಿ ತೆರೆದುಕೊಂಡಿರುವ ಅನೇಕ ಬಾಗಿಲುಗಳಿವೆ. ಆ ಬಾಗಿಲುಗಳಲ್ಲಿ ಪರದೆಗಳನ್ನು ಹಾಕಲಾಗಿದೆ. ಆ ನೇರ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಕೂಗಿ ಹೇಳುತ್ತಿರುತ್ತಾನೆ: "ಓ ಜನರೇ! ನೀವೆಲ್ಲರೂ ನೇರ ಮಾರ್ಗವನ್ನು ಪ್ರವೇಶಿರಿ. ಅತ್ತಿತ್ತ ತಿರುಗದೆ ನೇರವಾಗಿ ನಡೆಯಿರಿ." ಆ ಮಾರ್ಗದ ಮೇಲ್ಭಾಗದಲ್ಲಿ ಒಬ್ಬ ವ್ಯಕ್ತಿಯಿದ್ದು, ಆ ಬಾಗಿಲುಗಳಲ್ಲಿ ಯಾವುದಾದರೂ ಬಾಗಿಲನ್ನು ತೆರೆಯಲು ಪ್ರಯತ್ನಿಸಿದರೆ, ಅವನು ಕೂಗಿ ಹೇಳುತ್ತಾನೆ: "ನಿನಗೆ ದುರದೃಷ್ಟ ಕಾದಿದೆ! ಆ ಬಾಗಿಲನ್ನು ತೆರೆಯಬೇಡ. ನೀನು ಅದನ್ನು ತೆರೆದರೆ ಅದರ ಒಳಗೆ ಪ್ರವೇಶಿಸಿ ಬಿಡುವೆ." ಆ ನೇರ ಮಾರ್ಗವು ಇಸ್ಲಾಂ ಧರ್ಮವಾಗಿದೆ. ಆ ಎರಡು ಗೋಡೆಗಳು ಅಲ್ಲಾಹನ ಎಲ್ಲೆಗಳಾಗಿವೆ. ತೆರೆದುಕೊಂಡಿರುವ ಬಾಗಿಲುಗಳು ಅಲ್ಲಾಹು ನಿಷೇಧಿತ ವಲಯಗಳಾಗಿವೆ. ಆ ನೇರ ಮಾರ್ಗದ ಪ್ರವೇಶದ್ವಾರದಲ್ಲಿ ಕೂಗಿ ಕರೆಯುವುದು ಅಲ್ಲಾಹನ ಗ್ರಂಥವಾಗಿದೆ. ಆ ಮಾರ್ಗದ ಮೇಲ್ಭಾಗದಿಂದ ಕೂಗಿ ಕರೆಯುವುದು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿರುವ ಅಲ್ಲಾಹನ ಉಪದೇಶಕವಾಗಿದೆ."

86- "ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ. ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ ಕಡೆಯಿಂದಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." [ಆಲು ಇಮ್ರಾನ್:7] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ಕಂಡರೆ, ಅವರೇ ಅಲ್ಲಾಹು (ಈ ವಚನದಲ್ಲಿ) ಹೇಳಿದ ಜನರು (ಎಂದು ತಿಳಿಯಿರಿ); ಮತ್ತು ಅವರ ಬಗ್ಗೆ ಎಚ್ಚರವಾಗಿರಿ.*"

88- ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ಕುಳಿತುಕೊಂಡು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನನ್ನ ಅಧೀನದಲ್ಲಿ ಇಬ್ಬರು ಗುಲಾಮರಿದ್ದಾರೆ. ಅವರು ನನ್ನಲ್ಲಿ ಸುಳ್ಳು ಹೇಳುತ್ತಾರೆ, ನನಗೆ ಮೋಸ ಮಾಡುತ್ತಾರೆ ಮತ್ತು ನನ್ನ ಮಾತನ್ನು ಕೇಳುವುದಿಲ್ಲ. ನಾನು ಅವರಿಗೆ ಗದರಿಸುತ್ತೇನೆ ಮತ್ತು ಹೊಡೆಯುತ್ತೇನೆ. ಅವರಿಗೆ ಸಂಬಂಧಿಸಿದಂತೆ ನನ್ನ ಸ್ಥಿತಿಯೇನು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "@ಅವರು ಮೋಸ ಮಾಡಿದ್ದು, ತಮ್ಮ ಮಾತನ್ನು ಕೇಳದೇ ಇದ್ದದ್ದು ಮತ್ತು ತಮ್ಮಲ್ಲಿ ಸುಳ್ಳು ಹೇಳಿದ್ದನ್ನು ನೀವು ಅವರಿಗೆ ನೀಡಿದ ಶಿಕ್ಷೆಯೊಂದಿಗೆ ಅಳೆಯಲಾಗುತ್ತದೆ*. ನೀವು ನೀಡುವ ಶಿಕ್ಷೆಯು ಅವರು ಮಾಡಿದ ಪಾಪಗಳಷ್ಟೇ ಇದ್ದರೆ ಎರಡೂ ಸಮಾನವಾಗುತ್ತದೆ. ಅದರಲ್ಲಿ ನಿಮಗೆ ಪ್ರತಿಫಲ ಅಥವಾ ಶಿಕ್ಷೆಯಿಲ್ಲ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಕಡಿಮೆ ಇದ್ದರೆ ನಿಮಗೆ ಪ್ರತಿಫಲವಿದೆ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಹೆಚ್ಚಿದ್ದರೆ ಪ್ರತೀಕಾರವಾಗಿ ನಿಮ್ಮ ಕೆಲವು ಪುಣ್ಯಕಾರ್ಯಗಳನ್ನು ಅವರಿಗೆ ನೀಡಲಾಗುತ್ತದೆ." ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಗಟ್ಟಿಯಾಗಿ ಅಳತೊಡಗಿದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಲ್ಲಾಹನ ಗ್ರಂಥದಲ್ಲಿ ಈ ವಚನವನ್ನು ಪಠಿಸಿಲ್ಲವೇ? "ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ಓ ಅಲ್ಲಾಹನ ಸಂದೇಶವಾಹಕರೇ, ಅವರನ್ನು ಸ್ವತಂತ್ರಗೊಳಿಸುವುದಲ್ಲದೆ ನನಗಾಗಲಿ ಅವರಿಗಾಗಲಿ ಯಾವುದೇ ಒಳಿತನ್ನು ನಾನು ಕಾಣುತ್ತಿಲ್ಲ. ನಾನು ನಿಮ್ಮನ್ನು ಸಾಕ್ಷಿಯಾಗಿಸಿ ಅವರೆಲ್ಲರನ್ನೂ ಸ್ವತಂತ್ರಗೊಳಿಸುತ್ತಿದ್ದೇನೆ."

90- "@ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು.*" [ಅತ್ತಕಾಸುರ್ 102:8] ಎಂಬ ವಚನವು ಅವತೀರ್ಣವಾದಾಗ, ಝುಬೈರ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಯಾವ ಅನುಗ್ರಹದ ಬಗ್ಗೆ ನಮ್ಮೊಡನೆ ಪ್ರಶ್ನಿಸಲಾಗುತ್ತದೆ? ನಮ್ಮಲ್ಲಿರುವುದು ಎರಡು ಕಪ್ಪು ವಸ್ತುಗಳು—،ಖರ್ಜೂರ ಮತ್ತು ನೀರು ಮಾತ್ರವಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅದು ಖಂಡಿತವಾಗಿಯೂ ಸಂಭವಿಸುತ್ತದೆ."

97- "ಯಾರು ಒಬ್ಬ ಸತ್ಯವಿಶ್ವಾಸಿಯಿಂದ ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ನಿವಾರಿಸುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಅವನಿಂದ ನಿವಾರಿಸುತ್ತಾನೆ.* ಯಾರು ಕಷ್ಟದಲ್ಲಿರುವವರಿಗೆ ಸುಲಭಗೊಳಿಸುತ್ತಾನೋ, ಅಲ್ಲಾಹು ಅವನಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸುಲಭಗೊಳಿಸುತ್ತಾನೆ. ಯಾರು ಒಬ್ಬ ಮುಸ್ಲಿಮನ ನ್ಯೂನತೆಗಳನ್ನು ಮುಚ್ಚಿಡುತ್ತಾನೋ, ಅಲ್ಲಾಹು ಅವನ ನ್ಯೂನತೆಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಮುಚ್ಚಿಡುತ್ತಾನೆ. ದಾಸನು ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವ ತನಕ ಅಲ್ಲಾಹನು ದಾಸನಿಗೆ ಸಹಾಯ ಮಾಡುತ್ತಾನೆ. ಯಾರು ಜ್ಞಾನವನ್ನು ಹುಡುಕುತ್ತಾ ಒಂದು ದಾರಿಯನ್ನು ತುಳಿಯುತ್ತಾನೋ, ಅಲ್ಲಾಹು ಅವನಿಗೆ ಸ್ವರ್ಗಕ್ಕೆ ದಾರಿಯನ್ನು ಸುಲಭಗೊಳಿಸುತ್ತಾನೆ. ಒಂದು ಗುಂಪು ಜನರು ಅಲ್ಲಾಹನ ಮನೆಗಳ (ಮಸೀದಿಗಳ) ಪೈಕಿ ಒಂದರಲ್ಲಿ ಅಲ್ಲಾಹನ ಗ್ರಂಥವನ್ನು ಪಠಿಸಲು, ಮತ್ತು ಅದನ್ನು ತಮ್ಮ ನಡುವೆ ಅಧ್ಯಯನ ಮಾಡಲು ಒಟ್ಟುಗೂಡುತ್ತಾರೆ ಎಂದಾದರೆ, ಅವರ ಮೇಲೆ ಶಾಂತಿ ಇಳಿಯುತ್ತದೆ, ಕರುಣೆಯು ಅವರನ್ನು ಆವರಿಸುತ್ತದೆ, ದೇವದೂತರುಗಳು ಅವರನ್ನು ಸುತ್ತುವರಿಯುತ್ತಾರೆ ಮತ್ತು ಅಲ್ಲಾಹು ತನ್ನ ಹತ್ತಿರವಿರುವವರಿಗೆ ಅವರ ಬಗ್ಗೆ ತಿಳಿಸುತ್ತಾನೆ. ಯಾರ ಕರ್ಮಗಳು ಅವನನ್ನು ನಿಧಾನಗೊಳಿಸುತ್ತವೆಯೋ, ಅವನ ವಂಶವು ಅವನನ್ನು ಮುಂದಕ್ಕೆ ಒಯ್ಯುವುದಿಲ್ಲ."