Virtues and Manners

Virtues and Manners

1- "ಮಹಾಪಾಪಗಳಲ್ಲಿ ಅತಿದೊಡ್ಡ ಪಾಪದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?*" ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು. ಸಹಾಬಿಗಳು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನೊಡನೆ ಸಹಭಾಗಿತ್ವ ಮಾಡುವುದು ಮತ್ತು ತಂದೆ-ತಾಯಿಗೆ ಅವಿಧೇಯತೆ ತೋರುವುದು." ಒರಗಿ ಕುಳಿತಿದ್ದ ಅವರು ನೇರವಾಗಿ ಕುಳಿತು ಹೇಳಿದರು: "ಮತ್ತು ಸುಳ್ಳು ಹೇಳಿಕೆ ನೀಡುವುದು." "ಅವರು ಮೌನ ವಹಿಸಿದ್ದರೆ ಚೆನ್ನಾಗಿತ್ತು" ಎಂದು ನಾವು ಹೇಳುವ ತನಕ ಅವರು ಪುನರುಚ್ಛರಿಸುತ್ತಲೇ ಇದ್ದರು.

5- “ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ*” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.”

8- "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಅವನ ದಾಸ ಮತ್ತು ಸಂದೇಶವಾಹಕರಾಗಿದ್ದಾರೆ, ಯೇಸು (ಅವರ ಮೇಲೆ ಶಾಂತಿಯಿರಲಿ) ಅಲ್ಲಾಹನ ದಾಸರು, ಸಂದೇಶವಾಹಕರು ಮತ್ತು ಅಲ್ಲಾಹು ಮರ್ಯಮರಿಗೆ ಹಾಕಿಕೊಟ್ಟ ಅವನ ವಚನ ಮತ್ತು ಅವನ ವತಿಯ ಆತ್ಮವಾಗಿದ್ದಾರೆ, ಸ್ವರ್ಗ ಸತ್ಯವಾಗಿದೆ, ನರಕ ಸತ್ಯವಾಗಿದೆ ಎಂದು ಯಾರಾದರೂ ಸಾಕ್ಷ್ಯ ವಹಿಸಿದರೆ, @ಅವರ ಕರ್ಮಗಳು ಎಷ್ಟೇ ಕಡಿಮೆಯಾಗಿದ್ದರೂ ಸಹ ಅಲ್ಲಾಹು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವನು."

19- "ಇಬ್ಬರು ಮುಸ್ಲಿಮರು ತಮ್ಮ ಖಡ್ಗಗಳ ಮೂಲಕ ಪರಸ್ಪರ ಎದುರಾದರೆ, ಕೊಲೆಗಾರನು ಮತ್ತು ಕೊಲೆಯಾದವನು ಇಬ್ಬರೂ ನರಕಕ್ಕೆ ಹೋಗುತ್ತಾರೆ*." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಕೊಲೆಗಾರನು ನರಕಕ್ಕೆ ಹೋಗುವುದು ಸರಿ. ಆದರೆ ಕೊಲೆಯಾದವನು ಏಕೆ ನರಕಕ್ಕೆ ಹೋಗಬೇಕು?" ಅವರು ಉತ್ತರಿಸಿದರು: "ಏಕೆಂದರೆ ಅವನಿಗೆ ತನ್ನ ಎದುರಾಳಿಯನ್ನು ಕೊಲ್ಲಬೇಕೆಂಬ ಅತೀವ ಉತ್ಸಾಹವಿತ್ತು."

20- "ಹಲಾಲ್ ಅತ್ಯಂತ ಸ್ಪಷ್ಟವಾಗಿದೆ ಮತ್ತು ಹರಾಮ್ ಕೂಡ ಅತ್ಯಂತ ಸ್ಪಷ್ಟವಾಗಿದೆ*. ಇವೆರಡರ ಮಧ್ಯೆ ಸಂಶಯಾಸ್ಪದ ವಿಷಯಗಳಿವೆ. ಜನರಲ್ಲಿ ಹೆಚ್ಚಿನವರಿಗೂ ಅವುಗಳ ಬಗ್ಗೆ ಜ್ಞಾನವಿಲ್ಲ. ಯಾರು ಈ ಸಂಶಯಾಸ್ಪದ ವಿಷಯಗಳಿಂದ ದೂರವಿರುತ್ತಾನೋ, ಅವನು ತನ್ನ ಧರ್ಮ ಮತ್ತು ಘನತೆಯನ್ನು ಕಾಪಾಡಿಕೊಂಡನು. ಯಾರು ಈ ಸಂಶಯಾಸ್ಪದ ವಿಷಯಗಳಲ್ಲಿ ಒಳಪಡುತ್ತಾನೋ ಅವನು ಹರಾಮ್‌ನಲ್ಲಿ ಒಳಪಡುತ್ತಾನೆ. ಅವನ ಸ್ಥಿತಿಯು (ಪ್ರವೇಶಾನುಮತಿಯಿಲ್ಲದ) ಹುಲ್ಲುಗಾವಲಿನ ಅಂಚಿನಲ್ಲಿ ತನ್ನ ಕುರಿಮಂದೆಯನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಅವನ ಕುರಿಗಳು ಹುಲ್ಲುಗಾವಲಿನೊಳಗೆ ನುಗ್ಗಿ ಮೇಯುವ ಸಾಧ್ಯತೆಯಿದೆ. ಎಚ್ಚರಾ! ಪ್ರತಿಯೊಬ್ಬ ರಾಜನಿಗೂ ಒಂದು (ನಿಷೇಧಿತ) ವಲಯವಿದೆ. ಎಚ್ಚರಾ! ಅಲ್ಲಾಹು ನಿಷೇಧಿಸಿದ ಕಾರ್ಯಗಳು ಅವನ (ನಿಷೇಧಿತ) ವಲಯವಾಗಿದೆ. ಎಚ್ಚರಾ! ದೇಹದಲ್ಲಿ ಒಂದು ಮಾಂಸದ ತುಂಡಿದೆ. ಅದು ಸರಿಯಾದರೆ ಸಂಪೂರ್ಣ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಸಂಪೂರ್ಣ ದೇಹವು ಕೆಡುತ್ತದೆ. ಎಚ್ಚರಾ! ಅದು ಹೃದಯವಾಗಿದೆ."

21- "ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ಕಡ್ಡಾಯಗೊಳಿಸಿದ್ದಾನೆ*. ಆದ್ದರಿಂದ ನೀವು (ಪ್ರತೀಕಾರಕ್ಕಾಗಿ) ಕೊಲ್ಲುವಾಗ ಉತ್ತಮ ರೀತಿಯಲ್ಲಿ ಕೊಲ್ಲಿರಿ. ನೀವು (ಪ್ರಾಣಿಗಳನ್ನು ಮಾಂಸಕ್ಕಾಗಿ) ಕೊಯ್ಯುವಾಗ ಉತ್ತಮ ರೀತಿಯಲ್ಲಿ ಕೊಯ್ಯಿರಿ. ನಿಮ್ಮಲ್ಲೊಬ್ಬನು ಕೊಯ್ಯುವಾಗ ಚೂರಿಯನ್ನು ಹರಿತಗೊಳಿಸಲಿ ಮತ್ತು ಪ್ರಾಣಿಗೆ ನಿರಾಳತೆಯನ್ನು ನೀಡಲಿ."

35- ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನನ್ನ ಒಂಟೆ ಸುಸ್ತಾಗಿಬಿಟ್ಟಿದೆ. ಆದ್ದರಿಂದ ನನಗೆ ಸವಾರಿ ಮಾಡುವ ಒಂದು ಒಂಟೆಯನ್ನು ಕೊಡಿ." ಅವರು ಹೇಳಿದರು: "ನನ್ನ ಬಳಿ ಒಂಟೆಯಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನಿಗೆ ಒಂಟೆ ಕೊಡುವ ವ್ಯಕ್ತಿಯನ್ನು ನಾನು ತೋರಿಸುತ್ತೇನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಯಾರು ಒಳಿತನ್ನು ತೋರಿಸಿಕೊಡುತ್ತಾರೋ ಅವನಿಗೆ ಆ ಒಳಿತು ಮಾಡಿದ ವ್ಯಕ್ತಿಗೆ ದೊರಕುವಷ್ಟೇ ಪ್ರತಿಫಲ ದೊರಕುತ್ತದೆ*."

54- "ಯಾರು ಹತ್ತು ಬಾರಿ — ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ) ಎಂದು ಹೇಳುತ್ತಾನೋ*, ಅವನು ಇಸ್ಮಾಯೀಲರ ಸಂತಾನದಲ್ಲಿ ಸೇರಿದ ನಾಲ್ಕು ಗುಲಾಮರನ್ನು ವಿಮೋಚನೆಗೊಳಿಸಿದವನಂತೆ ಆಗುತ್ತಾನೆ."

74- ಒಮ್ಮೆ ಮುಆದ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಾಗ ಅವರು ಕರೆದರು: "ಓ ಮುಆದ್ ಬಿನ್ ಜಬಲ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಅವರು ಕರೆದರು: "ಓ ಮುಆದ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಹೀಗೆ ಅವರು ಮೂರು ಬಾರಿ ಕರೆದರು. ನಂತರ ಹೇಳಿದರು: "@ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ.*" ಮುಆದ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಜನರಿಗೆ ಸಂತೋಷವಾಗುವ ಈ ಸುದ್ದಿಯನ್ನು ನಾನು ಅವರಿಗೆ ತಿಳಿಸಲೇ?" ಅವರು ಹೇಳಿದರು: "ಬೇಡ, ಅವರು ಅದರ ಮೇಲೆ ಅವಲಂಬಿತರಾಗುವರು." (ಜ್ಞಾನವನ್ನು ಬಚ್ಚಿಟ್ಟ) ಪಾಪಕ್ಕೆ ಗುರಿಯಾಗದಿರಲು ಮುಆದ್ ಮರಣದ ಸಮಯದಲ್ಲಿ ಇದನ್ನು ಜನರಿಗೆ ತಿಳಿಸಿದರು.

75- ನಾನು ಮಗುವಾಗಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆರೈಕೆಯಲ್ಲಿದ್ದೆ. ನನ್ನ ಕೈ, ಬಟ್ಟಲಲ್ಲಿ ಅತ್ತಿತ್ತ ಹರಿದಾಡುತ್ತಿತ್ತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಮಗೂ, ಅಲ್ಲಾಹನ ಹೆಸರನ್ನು ಉಚ್ಛರಿಸು, ನಿನ್ನ ಬಲಗೈಯಿಂದ ಸೇವಿಸು, ಮತ್ತು ನಿನ್ನ ಹತ್ತಿರದಲ್ಲಿರುವುದನ್ನೇ ಸೇವಿಸು.*" ನಂತರ ಇದೇ ನನ್ನ ಆಹಾರ ಸೇವನೆಯ ವಿಧಾನವಾಯಿತು.

79- ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! (ಸ್ವರ್ಗ ಮತ್ತು ನರಕವನ್ನು) ಕಡ್ಡಾಯಗೊಳಿಸುವ ಎರಡು ವಿಷಯಗಳು ಯಾವುವು?" ಅವರು ಉತ್ತರಿಸಿದರು: "@ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುವವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಅಲ್ಲಾಹನೊಡನೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುವವರು ನರಕವನ್ನು ಪ್ರವೇಶಿಸುತ್ತಾರೆ."

81- "ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು*. ನಂತರ ಅವನ ಮುಂದೆ ತೊಂಬತ್ತೊಂಬತ್ತು ಸುರುಳಿಗಳನ್ನು ಇಡುವನು. ಪ್ರತಿಯೊಂದು ಸುರುಳಿಯೂ ದೃಷ್ಟಿ ತಲುಪುವಷ್ಟು ದೂರದವರೆಗೆ ಹರಡಿಕೊಂಡಿರುವುದು. ನಂತರ ಅವನು (ಅಲ್ಲಾಹು) ಕೇಳುವನು: "ಇವುಗಳಲ್ಲಿ ಯಾವುದನ್ನಾದರೂ ನೀನು ನಿರಾಕರಿಸುವೆಯಾ? ಕರ್ಮಗಳನ್ನು ದಾಖಲಿಸುವ ನನ್ನ ದೂತರು ನಿನಗೇನಾದರೂ ಅನ್ಯಾಯ ಮಾಡಿದ್ದಾರೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿನಗೆ ಹೇಳಲು ಏನಾದರೂ ನೆಪವಿದೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿಶ್ಚಯವಾಗಿಯೂ ನಮ್ಮ ಬಳಿ ನಿನಗೆ ಒಂದು ಒಳಿತಿದೆ. (ಹೆದರಬೇಡ), ಇಂದು ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಅವನು, "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ" ಎಂದು ಬರೆಯಲಾದ ಒಂದು ಚೀಟಿಯನ್ನು ಹೊರತೆಗೆಯುವನು. ನಂತರ ಅವನು ಹೇಳುವನು: "ನಿನ್ನ ತಕ್ಕಡಿಯನ್ನು ಇಲ್ಲಿಗೆ ತಾ." ಆ ವ್ಯಕ್ತಿ ಕೇಳುವನು: "ಓ ನನ್ನ ಪರಿಪಾಲಕನೇ! ಈ ಸುರುಳಿಗಳಿಗೆ ಹೋಲಿಸಿದರೆ ಈ ಚೀಟಿ ಎಷ್ಟು ತೂಗಬಹುದು?" ಆಗ ಅಲ್ಲಾಹು ಹೇಳುವನು: "(ಹೆದರಬೇಡ), ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ಆ ಸುರಳಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಮತ್ತು ಈ ಚೀಟಿಯನ್ನು ಇನ್ನೊಂದು ತಟ್ಟೆಯಲ್ಲಿ ಇಡಲಾಗುವುದು. ಆಗ ಸುರುಳಿಗಳು ಹಗುರವಾಗಿ ಚೀಟಿ ಭಾರವಾಗುವುದು. ಅಲ್ಲಾಹನ ಹೆಸರಿಗಿಂತಲೂ ಹೆಚ್ಚು ಭಾರವಾದದ್ದು ಯಾವುದೂ ಇಲ್ಲ."

82- "ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು*: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."

84- "ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ*, ಮುಅಝ್ಝಿನ್ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಸ್ಸಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಲ್ ಫಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ, ಮುಅಝ್ಝಿನ್ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."

97- "ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ಪ್ರಾರ್ಥಿಸುತ್ತಿದ್ದರು.* ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾವು ನಿಮ್ಮಲ್ಲಿ ಮತ್ತು ನೀವು ತಂದ ಧರ್ಮದಲ್ಲಿ ವಿಶ್ವಾಸವಿಟ್ಟಿದ್ದೇವೆ. ಆದರೂ ನಿಮಗೆ ನಮ್ಮ ಬಗ್ಗೆ ಭಯವೇ?" ಅವರು ಉತ್ತರಿಸಿದರು: "ಹೌದು, ನಿಶ್ಚಯವಾಗಿಯೂ ಹೃದಯಗಳು ಅಲ್ಲಾಹನ ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಇವೆ. ಅವನು ಇಚ್ಛಿಸುವಂತೆ ಅವುಗಳನ್ನು ತಿರುಗಿಸುತ್ತಾನೆ."